ಗಣರಾಜ್ಯೋತ್ಸವ ದಿನ ಪ್ರಧಾನಿಗೆ ಸಂವಿಧಾನದ ಪ್ರತಿ ಕಳುಹಿಸಿದ ಕಾಂಗ್ರೆಸ್

Update: 2020-01-26 17:48 GMT

ಹೊಸದಿಲ್ಲಿ, ಜ. 26: ಎಪ್ಪತ್ತೊಂದನೇ ಗಣರಾಜ್ಯೋತ್ಸವ ನಡೆದ ರವಿವಾರ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಪ್ರತಿಯೊಂದನ್ನು ಕಳುಹಿಸಿ ಕೊಟ್ಟಿದೆ. ಅಲ್ಲದೆ, ದೇಶ ವಿಭಜಿಸುವ ನಡುವೆ ನಿಮಗೆ ಸಮಯ ದೊರೆತಾಗ ದಯವಿಟ್ಟು ಓದಿ ಎಂದು ಹೇಳಿದೆ.

ಕೇಂದ್ರ ಸರಕಾರ ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದೆ. ಇತ್ತೀಚೆಗೆ ರಾಜಘಾಟ್‌ನಲ್ಲಿ ಪ್ರತಿಭಟನಾ ಸಭೆ ಸೇರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ವಾದ್ರಾ ಸಂವಿಧಾನದ ಪ್ರಸ್ತಾವನೆ ಓದಿರುವ ವೀಡಿಯೊವನ್ನು ಕೂಡ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘‘ಆತ್ಮೀಯ ಪ್ರಧಾನಿಯವರೆ, ಶೀಘ್ರದಲ್ಲಿ ಸಂವಿಧಾನದ ಪ್ರತಿ ನಿಮ್ಮ ಕೈ ಸೇರಲಿದೆ. ದೇಶ ವಿಭಜಿಸುವ ನಡುವೆ ನಿಮಗೆ ಸಮಯ ದೊರೆತರೆ ದಯವಿಟ್ಟು ಓದಿ’’ ಎಂದು ಸಂವಿಧಾನದ ಪ್ರತಿ ಕೇಂದ್ರ ಸರಕಾರದ ಕಾರ್ಯಾಲಯದಲ್ಲಿ ವಿಲೇವಾರಿಯಾದ ಅಮೆಝಾನ್ ರಶೀದಿಯ ಸ್ಕ್ರೀನ್ ಶಾಟ್‌ನೊಂದಿಗೆ ಟ್ವೀಟ್ ಮಾಡಿದೆ. ಇನ್ನೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, ಸಂವಿಧಾನದ ಕಲಂ 14ರ ಅಡಿಯಲ್ಲಿ ಬರುವ ಕಾನೂನಿನ ಮುಂದೆ ಎಲ್ಲಾ ಜಾತಿ, ಪಂಥ, ಜನಾಂಗ ಹಾಗೂ ಲಿಂಗದ ವ್ಯಕ್ತಿಗಳು ಸಮಾನರು ಎಂಬುದನ್ನು ಅರಿತುಕೊಳ್ಳಲು ಬಿಜೆಪಿ ವಿಫಲವಾಗಿದೆ ಎಂದು ಹೇಳಿದೆ. ಈ ಕಲಂ ಅನ್ನು ಪೌರತ್ವ ತಿದ್ದುಪಡಿ ಕಾಯ್ದೆ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News