ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ 300ಕ್ಕೂ ಅಧಿಕ ಗಣ್ಯರಿಂದ ಬಹಿರಂಗ ಪತ್ರ

Update: 2020-01-26 18:03 GMT

ಹೊಸದಿಲ್ಲಿ, ಜ. 26: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಭಾರತದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ವಿರೋಧ ವ್ಯಕ್ತಪಡಿಸಿ ಚಿತ್ರ ನಿರ್ದೇಶಕಿಯರು, ನಟರು, ವಿದ್ಯಾಂಸರು ಹಾಗೂ ಲೇಖಕಿಯರೂ ಸೇರಿದಂತೆ 300ಕ್ಕೂ ಅಧಿಕ ಗಣ್ಯರು ಬಹಿರಂಗ ಪತ್ರ ಬಿಡುಗಡೆ ಮಾಡಿದ್ದಾರೆ.

 ಈ ಬಹಿರಂಗ ಪತ್ರಕ್ಕೆ ‘‘ಭಾರತದ ಸೃಜನಶೀಲ ಹಾಗೂ ವಿದ್ವತ್ ಸಮುದಾಯದ ಸದಸ್ಯರ ಬಹಿರಂಗ ಹೇಳಿಕೆ’’ ಎಂದು ಹೆಸರಿಲಾಗಿದೆ. ಈ ಬಹಿರಂಗ ಪತ್ರಕ್ಕೆ ನಿರ್ದೇಶಕಿ ಮೀರಾ ನಾಯರ್, ನಟಿ ನಂದಿತಾ ದಾಸ್, ನಟರಾದ ನಾಸೀರುದ್ದಿನ್ ಶಾ, ರತ್ನಾ ಪಾಠಕ್ ಶಾ, ಜಾವೆದ್ ಜಾಫ್ರಿ, ವಿದ್ವಾಂಸರಾದ ಹೋಮಿ ಕೆ. ಬಾಬಾ, ಪಾರ್ಥಾ ಚಟರ್ಜಿ, ಆಶಿಶ್ ನಂದಿ, ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಹಾಗೂ ಲೇಖಕಿಯರಾದ ಅನಿತಾ ದೇಸಾಯಿ, ಕಿರಣ್ ದೇಸಾಯಿ ಸೇರಿದಂತೆ 300ಕ್ಕೂ ಅಧಿಕ ಗಣ್ಯರು ಸಹಿ ಹಾಕಿದ್ದಾರೆ.

 ವಿವಾದಾತ್ಮಕ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅವರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ಸಂವಿಧಾನದ ಸಿದ್ಧಾಂತ ಎತ್ತಿ ಹಿಡಿಯುವ ಅವರ ಸಾಮೂಹಿಕ ಧ್ವನಿ ಬಗ್ಗೆ ವಂದನೆ ಸಲ್ಲಿಸಿದ್ದಾರೆ. ‘‘ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಮಾತನಾಡುವ ವಿದ್ಯಾರ್ಥಿಗಳು ಹಾಗೂ ಇತರರಿಗೆ ನಾವು ಬೆಂಬಲ ವ್ಯಕ್ತಪಡಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ಅನ್ಯಾಯದ ಬಗ್ಗೆ ಹಲವರು ಮೌನ ವಹಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಗಣ್ಯರು, ‘‘ಈ ಹಿಂದೆ ನಮ್ಮಲ್ಲಿ ವೌನವಾಗಿದ್ದವರಲ್ಲಿ ಕೆಲವರು ಈಗ ವೌನ ಮುರಿದಿದ್ದಾರೆ. ನಾವು ನಮ್ಮ ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಂತೆ, ನಾವು ಭಾರತದ ಜಾತ್ಯತೀತ ಹಾಗೂ ಒಳಗೊಳ್ಳುವಿಕೆಯ ನಿಲುವಿಗೆ ಬೆಂಬಲವಾಗಿ ನಿಲ್ಲಲಿದ್ದೇವೆ. ಮುಸ್ಲಿಂ ವಿರೋಧಿ ಹಾಗೂ ವಿಭಜನೀಯ ನೀತಿಗಳನ್ನು ನಾವು ದಿಟ್ಟತನದಿಂದ ಎದುರಿಸಲಿದ್ದೇವೆ. ಪ್ರಜಾಪ್ರಭುತ್ವದೊಂದಿಗೆ ನಿಲ್ಲುವವರಿಗೆ ನಾವು ಬೆಂಬಲ ನೀಡಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಫರಾಝ್ ಅಹ್ಮದ್, ಅನ್ವರ್ ಅಲಿ, ಝಹೀರ್ ಅಲಿ, ಲಲಿತಾ ಅಲಿಲು, ಶಿಮಿತ್ ಅಮಿನ್, ಜ್ಯೋತಿ ಅನಂತ ಸುಬ್ಬರಾವ್, ವಿದ್ಯಾ ದಾಸ್ ಅರೋರಾ, ಸುಶೀಲಾ ಬಹಂಡಾ, ವಿಕಾಸ್ ಬಾಜಪೇಯಿ, ರಿತ್ವಿಕ್ ಬ್ಯಾನರ್ಜಿ, ಸುದೇಷ್ಣಾ ಬ್ಯಾನರ್ಜಿ, ಸುಮಂತಾ ಬ್ಯಾನರ್ಜಿ ಹಾಗೂ ಅಮೀರ್ ಬಷೀರ್ ಹಾಗೂ ಇತರರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News