ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ: ಎಸ್ಪಿ ವಿದ್ಯಾರ್ಥಿ ನಾಯಕ ಸಹಿತ 10 ಮಂದಿಯ ಬಂಧನ

Update: 2020-01-26 18:05 GMT

ಗುವಾಹಟಿ, ಜ. 26: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿರುವುದಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ವಿದ್ಯಾರ್ಥಿ ನಾಯಕ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಜೈಲಿಗೆ ಕಳುಹಿಸಲಾಗಿದೆ.

ಶಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಬಂಧಿತರಾದ 8 ಮಂದಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ದಿಲ್ಲಿ ಮೂಲದ ವ್ಯಕ್ತಿಯೋರ್ವನನ್ನು ಲಕ್ನೋದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಗೂ ದಿಲ್ಲಿಯ ಜಾಮಿಯಾನಗರ ಪ್ರದೇಶದಲ್ಲಿ ವಾಸಿಸುವ ಫೈಝಾನ್ ಇಲಾಹಿ ಬಗ್ಗೆ ನಾವು ಸ್ಥಳೀಯ ಬೇಹುಗಾರರಿಂದ ಮಾಹಿತಿ ಪಡೆದೆವು. ಶಹೀನ್‌ಬಾಗ್‌ನಲ್ಲಿ ನಿರಂತರ ಪ್ರತಿಭಟನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಅಲ್ಲದೆ ಕ್ಲಾಕ್‌ಟವರ್ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಪ್ರತಿಭಟನೆ ನಡೆಸಿದ ಮಹಿಳೆಯರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿರುವುದಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ನಾಯಕಿ ಪೂಜಾ ಶುಕ್ಲಾ ಹಾಗೂ ಇತರ 6 ಮಂದಿಯೊಂದಿಗೆ ಈತನನ್ನು ಬಂಧಿಸಲಾಗಿದೆ’’ ಎಂದು ಲಕ್ನೊ ಪೊಲೀಸ್‌ನ ಹೆಚ್ಚುವರಿ ಡಿಸಿಪಿ ವಿಕಾಸ್ ಚಂದ್ರ ತ್ರಿಪಾಠಿ ತಿಳಿಸಿದ್ದಾರೆ.

ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಜೈಲಿಗೆ ಕಳುಹಿಸಲಾಗಿದೆ ಎಂದು ತ್ರಿಪಾಠಿ ಹೇಳಿದ್ದಾರೆ. ಲಕ್ನೋದ ಕ್ಲಾಕ್‌ಟವರ್‌ನಲ್ಲಿ ಶನಿವಾರ ಮಧ್ಯಾಹ್ನ ಪೂಜಾ ಶುಕ್ಲಾ ಹಾಗೂ ಪುರುಷರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ತಮ್ಮಾಂದಿಗೆ ದುರ್ನಡತೆ ತೋರಿದ್ದಾರೆ ಹಾಗೂ ನಿಂದನಾತ್ಮಕ ಭಾಷೆ ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದರು.

ಈ ನಡುವೆ ಲಕ್ನೋ ಪೊಲೀಸರು ಜನಪ್ರಿಯ ಧಾರ್ಮಿಕ ವಿದ್ವಾಂಸ ವೌಲನಾ ಕಲ್ಬೆ ಸಾದಿಕ್ ಪುತ್ರ ಕಲ್ಬೆ ಸಿಬ್ಟೈನ್ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News