ಪತ್ರಕರ್ತರ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಬೈರತಿ ಬಸವರಾಜು

Update: 2020-01-26 18:32 GMT

ಬೆಂಗಳೂರು, ಜ. 26: ಬೆಂಗಳೂರು ಪೂರ್ವ ತಾಲೂಕು ಪತ್ರಕರ್ತರ ಭವನಕ್ಕೆ ಜಾಗ ಗುರುತಿಸಲಾಗಿದ್ದು, ಶೀಘ್ರವೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬೈರತಿ ಬಸವರಾಜು ತಿಳಿಸಿದ್ದಾರೆ.

ರವಿವಾರ 71ನೆ ಗಣರಾಜ್ಯೋತ್ಸವ ಅಂಗವಾಗಿ ಕೆ.ಆರ್.ಪುರದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯ ಬದುಕು ನಡೆಸುವಂತಾಗಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಗಾಗಿ ಸಿಎಂ ಯಡಿಯೂರಪ್ಪಸರಕಾರ 625 ಕೋಟಿ ರೂ. ನೀಡಿದ್ದು, ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದ ಅವರು, ಬಡವರಿಗೆ ಸೂರು ನೀಡುವ ಉದ್ದೇಶದಿಂದ ಜ.28ರಂದು ಸರಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಜ.30ರಂದು ಕೆ.ಆರ್.ಪುರ ನೂತನ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ತೇಜಸ್ ಕುಮಾರ್ ಮಾತನಾಡಿ, ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತ ಮಾಡಲು ಎಲ್ಲರೂ ಕೈ ಜೋಡಿಸಬೇಕು. ಕಸವನ್ನು ಬೇರ್ಪಡಿಸಿ ಬಿಬಿಎಂಪಿಗೆ ನೀಡುವ ಮೂಲಕ ಉತ್ತಮ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ, ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಿದ್ದು ಎಲ್ಲರೂ ಬಟ್ಟೆ ಕೈಚೀಲಗಳನ್ನು ಬಳಸಬೇಕು ಎಂದು ಸಲಹೆ ಮಾಡಿದರು.

 ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಜಂಟಿ ಆಯುಕ್ತ ವೆಂಕಟಾಚಲಪತಿ, ಬಿಇಒ ಹನುಮಂತರಾಯಪ್ಪ, ಇನ್ಸ್‌ಪೆಕ್ಟರ್ ಅಂಬರೀಶ್, ಇಒ ಮಂಜುನಾಥ್, ಪಾಲಿಕೆ ಸದಸ್ಯ ಶ್ರೀಕಾಂತ್, ಮಂಜುಳಾದೇವಿ, ಆಂತೋಣಿಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಭಾಗ್ಯಮ್ಮ ಸತೀಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News