2000 ಕೋಟಿ ರೂ. ಕೃಷಿನಿಧಿಯಲ್ಲಿ ಬಳಕೆಯಾದ್ದೆಷ್ಟು ಗೊತ್ತೇ?

Update: 2020-01-27 04:15 GMT

ಹೊಸದಿಲ್ಲಿ, ಜ.27: ರೈತರಿಗೆ ಸರಣಿ ಆಧುನಿಕ ಮಾರುಕಟ್ಟೆಗಳನ್ನು ಕಲ್ಪಿಸುವ ಸಲುವಾಗಿ 2000 ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ 2018-19ನೇ ಸಾಳಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಈ ಪೈಕಿ ಬಹುತೇಕ ಹಣ ವೆಚ್ಚವಾಗದೇ ಇರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಎರಡು ವರ್ಷಗಳಲ್ಲಿ ಈ ಉದ್ದೇಶಕ್ಕೆ ಬಳಕೆಯಾಗಿರುವುದು ಕೇವಲ 10 ಕೋಟಿ ರೂಪಾಯಿ!

ಅತಿ ನಿಯಂತ್ರಿತ ಕೃಷಿ ಮಾರುಕಟ್ಟೆಗಳು ರೈತರನ್ನು ಹಳೆಯ ಹಾಗೂ ಅಪ್ರಸ್ತುತ ನೀತಿಗಳಿಂದ ಬಂಧಿಸಿವೆ ಎಂದು ತಜ್ಞರು ಹೇಳುತ್ತಾರೆ. ಈ ಮಾರುಕಟ್ಟೆಗಳು ಗ್ರಾಮಮಟ್ಟದ ಬಜಾರ್‌ಗಳಾಗಿದ್ದು, ಕೃಷಿ ಉತ್ಪನ್ನಗಳನ್ನು ಕ್ರೋಢೀಕರಿಸುವ ಕೇಂದ್ರಗಳು. ಕನಿಷ್ಠ ನಿಯಮಾವಳಿಯೊಂದಿಗೆ ಮುಕ್ತವಾಗಿ ಇಲ್ಲಿ ರೈತರು ಹಾಗೂ ವ್ಯಾಪಾರಿಗಳು ವಹಿವಾಟು ನಡೆಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಪೂರೈಕೆ ಸರಣಿಗೆ ಪರ್ಯಾಯ ಕಲ್ಪಿಸುವುದು ಮತ್ತು ರೈತರ ಪಾಲಿನ ಲಾಭ ಕೊಳ್ಳೆ ಹೊಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು.

ಈ ಯೋಜನೆ ಘೋಷಣೆಯಾಗಿ ಎರಡು ವರ್ಷಗಳಲ್ಲಿ ಕೇವಲ 10.45 ಕೋಟಿ ರೂಪಾಯಿ ಅಂದರೆ ಒಟ್ಟು ಮೀಸಲಿಟ್ಟ ಹಣದ 0.5 ಶೇಕಡ ಹಣ ಮಾತ್ರ ಬಳಕೆಯಾಗಿರುವುದು ಅಂಕಿಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ. ದೇಶಾದ್ಯಂತ 22 ಸಾವಿರ ಇಂಥ ಮಿನಿ ಮಾರುಕಟ್ಟೆಗಳ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಆದರೆ ಕೇವಲ 376 ಮಾರುಕಟ್ಟೆಗಳು ಮಾತ್ರ ಇದುವರೆಗೆ ನಿರ್ಮಾಣವಾಗಿದ್ದು, ಯಾವ ಮಾರುಕಟ್ಟೆಯೂ ಬಳಕೆಗೆ ಮುಕ್ತವಾಗಿಲ್ಲ.

2018-19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮಾರುಕಟ್ಟೆ ಮೂಲ ಸೌಕರ್ಯ ನಿಧಿ (ಎಎಂಐಎಫ್) ಹೆಸರಿನಲ್ಲಿ 2000 ಕೋಟಿ ರೂ. ಮೀಸಲಿಡಲಾಗಿತ್ತು. ಗ್ರಾಮೀಣ ಕೃಷಿ ಮಾರುಕಟ್ಟೆ (ಗ್ರಾಮ್ಸ್) ಹೆಸರಿನಿಂದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News