ಏರ್ ಇಂಡಿಯಾ ಮಾರಾಟಕ್ಕೆ ಸರಕಾರದಿಂದ 2ನೇ ಬಾರಿ ಪ್ರಯತ್ನ

Update: 2020-01-27 05:58 GMT

ಹೊಸದಿಲ್ಲಿ, ಜ.27: ಸಾಲದ ಹೊರೆಯಿಂದ ತತ್ತರಿಸಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಕೇಂದ್ರ ಸರಕಾರ ಮತ್ತೊಮ್ಮೆ ಮಾರಾಟ ಮಾಡಲು ಮುಂದಾಗಿದೆ.
ಏರ್ ಇಂಡಿಯಾದಲ್ಲಿ ತನ್ನ ಸಂಪೂರ್ಣ ಪಾಲನ್ನು ತ್ಯಜಿಸಲು ಸರ್ಕಾರ ಸೋಮವಾರ ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿದೆ, ಏರ್‌ಲೈನ್ಸ್‌ನ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮಾರಾಟಕ್ಕಿದೆ.
ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಬಿಡ್ ಆಹ್ವಾನಿಸಿದ್ದು, , ಬಿಡ್ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 17. ಅರ್ಹ ಬಿಡ್ದಾರರಿಗೆ ಮಾರ್ಚ್ 31 ರಂದು ತಿಳಿಸಲಾಗುವುದು
ಕೇಂದ್ರ ಸರ್ಕಾರವು ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ  ಶೇ100 ಪಾಲನ್ನು ಹೊಂದಿದೆ. ಎಐಎಸ್ಎಟಿಎಸ್ ಏರ್ ಇಂಡಿಯಾ ಮತ್ತು ಸಿಂಗಾಪುರ್ ಏರ್ಪೋರ್ಟ್ ಟರ್ಮಿನಲ್ ಸರ್ವೀಸಸ್ (ಎಸ್ಎಟಿಎಸ್) ಲಿಮಿಟೆಡ್ ನಡುವಿನ ಜಂಟಿ ಸಹಭಾಗಿತ್ವವಾಗಿದ್ದು, ಇದು ಗ್ರೌಂಡ್  ಮತ್ತು ಸರಕು ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ.
2018 ರಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಮಾನಯಾನದಲ್ಲಿ ಶೇ76ರಷ್ಟು  ಪಾಲನ್ನು ಬಿಟ್ಟುಕೊಡಲು  ಮುಂದಾಗಿತ್ತು. ಆದರೆ  ಯಾರಿಂದಲೂ ಹೆಚ್ಚಿನ ಆಸಕ್ತಿ ಕಂಡು ಬರಲಿಲ್ಲ.
ಕಳೆದ ಒಂದು ದಶಕದಲ್ಲಿ ಏರ್ ಇಂಡಿಯಾದ ಒಟ್ಟು ನಷ್ಟವು ಸುಮಾರು ರೂ 69,575.64 ಕೋಟಿಗಳಷ್ಟಾಗಿದೆ  ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ತಿಳಿಸಿದ್ದರು.
ದೇಶೀಯ ಮಾರುಕಟ್ಟೆಯಲ್ಲಿ ಶೇ 12.7 ರಷ್ಟು  ಪಾಲನ್ನು ಹೊಂದಿರುವ ಏರ್ ಇಂಡಿಯಾ, 2019 ರಲ್ಲಿ 18.36 ಮಿಲಿಯನ್ ದೇಶೀಯ ಪ್ರಯಾಣಿಕರಿಗೆ ವಿಮಾನಯಾನ ಸೇವೆಯನ್ನು ಒದಗಿಸಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಂಕಿ ಅಂಶಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News