ಅಂತರ್ಜಲ ವೃದ್ಧಿಗೆ ‘ಅಟಲ್ ಬಹುಜಲ್’ ಯೋಜನೆ: ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

Update: 2020-01-27 18:34 GMT

ಬೆಂಗಳೂರು, ಜ. 27: ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ 14 ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಅಂತರ್ಜಲ ಕುಸಿದಿದೆ. ಹೀಗಾಗಿ ಆ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ ಕೆರೆಗಳ ಮರುಪೂರಣಕ್ಕೆ ‘ಅಟಲ್ ಬಹುಜಲ್’ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಲ್ಕಂಡ 14 ಜಿಲ್ಲೆಗಳ 40ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಸ್ವರೂಪದ ಅಂತರ್ಜಲ ಕುಸಿದಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೆರೆಗಳ ಮರುಪೂರಣಕ್ಕೆ 1,200 ಕೋಟಿ ರೂ.ಗಳಷ್ಟು ನೆರವು ನೀಡಲಿದೆ. ಆ ಅನುದಾನವನ್ನು ಬಳಕೆ ಮಾಡಿಕೊಂಡು ಸಣ್ಣ ನೀರಾವರಿ ಇಲಾಖೆ ಆ ವ್ಯಾಪ್ತಿಯಲ್ಲಿ ಬರುವ ರಾಜ್ಯದ 3600ಕ್ಕೂ ಹೆಚ್ಚು ಕೆರೆಗಳ ಸರ್ವೆ, ಒತ್ತುವರಿ ತೆರವು, ಹೂಳು ತೆಗೆದು, ಮಳೆ ನೀರಿನ ಸಂಪರ್ಕ ಕಲ್ಪಿಸುವ ಮೂಲಕ ಕೆರೆ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳನ್ನು ಈ ಯೋಜನೆಗೆ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಕೆರೆಯಿಂದ ಕೆರೆಗೆ ಮತ್ತು ಹಳ್ಳಗಳ ಸಂಪರ್ಕ ಜಾಲವನ್ನು ಜೋಡಣೆ ಮಾಡಲಾಗುವುದು. ಅಲ್ಲದೆ, ಕೆರೆಗಳಲ್ಲಿ ನೀರು ನಿಲ್ಲಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ಜಿ.ಪಂ. ವ್ಯಾಪ್ತಿಗೆ ಹೆಚ್ಚಿನ ಕೆರೆಗಳು ಬರುತ್ತವೆ. ನಿರ್ವಹಣೆ ದೃಷ್ಟಿಯಿಂದ ರಾಜ್ಯದ ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರುವ ಅಗತ್ಯವಿದೆ ಎಂದ ಅವರು, ಬೆಂಗಳೂರು ನಗರದ ಕೆರೆಗಳನ್ನು ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೆ ಆಗಲಿದೆ. ಆದರೆ, ಯಾವುದೇ ಕಾರಣಕ್ಕೂ ಪುನರಚನೆ ಮಾಡುವುದಿಲ್ಲ. ಈ ಬಗ್ಗೆ ವರಿಷ್ಠರು ಚರ್ಚಿಸಿಲ್ಲ. ‘ಅರ್ಹ’ ಮತ್ತು ಹೊಸಬರಿಗಾಗಿ ಕೆಲವರು ಸ್ಥಾನ ತ್ಯಾಗ ಮಾಡಬೇಕೆಂಬ ಬಗ್ಗೆ ಎಲ್ಲಿಯೂ ಚರ್ಚಿಸಿಲ್ಲ. ಬಿಜೆಪಿ ಸರಕಾರವಿದ್ದರಷ್ಟೇ ನಾವು ಸಚಿವರಾಗಿರುವುದು. ಹೀಗಾಗಿ ಮಾಧ್ಯಮಗಳ ಪ್ರಶ್ನೆಗೆ ತಾನು ಸಚಿವ ಸ್ಥಾನವಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದೆ’

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News