ಲಿಯಾಂಡರ್ ಪೇಸ್ ಸವಾಲು ಅಂತ್ಯ

Update: 2020-01-28 17:42 GMT

ಮೆಲ್ಬೋರ್ನ್, ಜ.28: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರ ಸವಾಲು ಅಂತ್ಯವಾಗಿದೆ.

ಜೆಲೆನಾ ಒಸ್ಟಾಪೆಂಕೊ ಜೊತೆ ಮಿಶ್ರ ಡಬಲ್ಸ್ ಪಂದ್ಯವನ್ನಾಡಿದ ಪೇಸ್ ಅವರು ಜಮ್ಮಿ ಮರ್ರೆ ಹಾಗೂ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ವಿರುದ್ಧ ನೇರ ಸೆಟ್‌ಗಳಿಂದ ಸೋತಿದ್ದಾರೆ.

46ರ ಹರೆಯದ ಪೇಸ್ ಹಾಗೂ ಲಾಟ್ವಿಯದ 2017ರ ಫ್ರೆಂಚ್ ಓಪನ್ ಚಾಂಪಿಯನ್ ಒಸ್ಟಾಪೆಂಕೊ ಒಂದು ಗಂಟೆ ಹಾಗೂ 7 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್-ಅಮೆರಿಕದ ಜೋಡಿಯ ವಿರುದ್ಧ 2-6, 5-7 ಅಂತರದಿಂದ ಸೋಲುಂಡಿದ್ದಾರೆ. 2020ರಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳುವುದಾಗಿ ಪೇಸ್ ಈಗಾಗಲೇ ಘೋಷಿಸಿದ್ದಾರೆ. ರೋಹನ್ ಬೋಪಣ್ಣ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.

39ರ ಹರೆಯದ ‘ಕೊಡಗಿನ ಕುವರ’ ಬೋಪಣ್ಣ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್ ಬುಧವಾರ ನಡೆಯಲಿರುವ ಮಿಕ್ಸೆಡ್ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ನಿಕೊಲಾ ಮೆಕ್‌ಟಿಕ್ ಹಾಗೂ ಬಾರ್ಬೊರ ಕ್ರೆಜ್‌ಸಿಕೋವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News