ಉನ್ನತ ಶಿಕ್ಷಣ: ಇಲಿನಾಯ್ಸ್ ವಿವಿ ಜತೆ ಒಡಂಬಡಿಕೆಗೆ ರಾಜ್ಯ ಸರಕಾರ ನಿರ್ಧಾರ

Update: 2020-01-29 12:08 GMT

ಬೆಂಗಳೂರು, ಜ. 29: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಹಾಗೂ ನಮ್ಮ ವಿಶ್ವ ವಿದ್ಯಾಲಯಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯ ಮುಂದೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಭೇಟಿ ಮಾಡಿದ ಅಮೆರಿಕಾದ ಇಲಿನಾಯ್ಸ್ ವಿಶ್ವವಿದ್ಯಾಲಯದ ಅಧ್ಯಕ್ಷ ತಿಮೋಟಿ ಕಿಲೆನ್ ನೇತೃತ್ವದ ತಂಡ ಈ ಸಂಬಂಧ ಮಾತುಕತೆ ನಡೆಸಿತು. ಎಂ.ಎಸ್.ರಾಮಯ್ಯ ವಿವಿ ಜತೆ 3 ವರ್ಷಗಳಿಂದ ಇಲಿನಾಯ್ಸ್ ವಿವಿ ಕೆಲಸ ಮಾಡುತ್ತಿದ್ದು, ಈಗ ಇತರ ವಿವಿಗಳ ಜತೆಗೂ ಕಾರ್ಯ ನಿರ್ವಹಿಸಲು ಮುಂದೆ ಬಂದಿದೆ. ಇಲಿನಾಯ್ಸಿ ವಿವಿಯ ಈ ನಿರ್ಧಾರವನ್ನು ರಾಜ್ಯ ಸರಕಾರ ಸ್ವಾಗತಿಸುತ್ತದೆ ಎಂದರು.

ಶಿಕ್ಷಣ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ, ತಂತ್ರಜ್ಞಾನ, ದೂರಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಇಲಿನಾಯ್ಸ್ ವಿಶ್ವ ವಿದ್ಯಾಲಯದ ಜತೆ ಕೆಲಸ ಮಾಡಲು ಆಸಕ್ತಿ ಇದೆ. ವಿಶ್ವಮಟ್ಟದ ಉನ್ನತ ಶಿಕ್ಷಣ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೂ ಸಿಗಲಿ ಎನ್ನುವ ಕಾರಣಕ್ಕೆ ಈ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಶ್ವಥ್ ನಾರಾಯಣ ಹೇಳಿದರು.

ತಮ್ಮ ಕಾರ್ಯದರ್ಶಿ ಪ್ರದೀಪ್ ಅವರನ್ನು ಈ ಕೂಡಲೇ ಜಾರಿ ಬರುವಂತೆ ನೋಡಲ್ ಅಧಿಕಾರಿಯಾಗಿ ನೇಮಿಸುವುದು ಎಂದ ಅವರು, ಇಲಿನಾಯ್ಸ್ ವಿವಿ ಪ್ರತಿನಿಧಿಗಳು ನೋಡಲ್ ಅಧಿಕಾರಿಯನ್ನು ನೇಮಿಸಲು ಸ್ಥಳದಲ್ಲೇ ಒಪ್ಪಿಗೆ ಸೂಚಿಸಿದರು. ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ತಕ್ಷಣದ ಈ ತೀರ್ಮಾನಕ್ಕೆ ವಿದೇಶಿ ಗಣ್ಯರ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.

ನಗರದಲ್ಲಿ ಇಲಿನಾಯ್ಸ್ ಕಚೇರಿ: ಬೆಂಗಳೂರು ಸೆಂಟ್ರಲ್ ವಿವಿಯ ಆವರಣದಲ್ಲಿ ಇಲಿನಾಯ್ಸ್ ವಿವಿ ಕಚೇರಿ ತೆರೆಯಲು ಜಾಗ ನೀಡುವುದಕ್ಕೂ ಒಪ್ಪಿಗೆ ಸೂಚಿಸಿದ ಅವರು, ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಶ್ವಥ್ ನಾರಾಯಣ, ಗುಣಮಟ್ಟದ ಶಿಕ್ಷಣವನ್ನು ರಾಜ್ಯದ ಮಕ್ಕಳಿಗೂ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಹೊಸ ಆವಿಷ್ಕಾರಗಳತ್ತ ಮುಖ ಮಾಡುತ್ತಿದ್ದೇವೆ. ಇದರ ಒಂದು ಭಾಗವಾಗಿ ವಿದೇಶಿ ವಿವಿಗಳ ಜತೆಗೂ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು, ಇದು ಮುಂದುವರಿಯಲಿದೆ ಎಂದರು.

19 ಕೋಟಿ ರೂ.ನೆರವು: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಸಲುವಾಗಿ ಇಂಗ್ಲೆಂಡ್ ಸರಕಾರ 19 ಕೋಟಿ ರೂ.ನೆರವು ನೀಡಲಿದೆ ಎಂದರು. ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ನೇತೃತ್ವದ ತಂಡ ಇತ್ತೀಚೆಗೆ ಇಂಗ್ಲೆಂಡ್‌ನ ಸಾಲ್ಫೋರ್ಡ್ ವಿವಿಗೆ ಭೇಟಿ ನೀಡಿದ್ದ ವೇಳೆ ಇದಕ್ಕೆ ಒಪ್ಪಿಗೆ ಸಿಕ್ಕಿತ್ತು. ಇದಕ್ಕೆ ಪೂರಕವಾಗಿ ಸಂಶೋಧನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಗಳನ್ನು ಸಲ್ಲಿಸುವ ಕೆಲಸ ಆರಂಭವಾಗಿದ್ದು, 3ತಿಂಗಳಲ್ಲಿ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News