ನೀವು ದೇಶಭಕ್ತರೇ ಆಗಿದ್ದರೆ ದಲಿತರಿಗೆ ಸ್ಮಶಾನದಲ್ಲಿ ಜಾಗ ಕೊಡಿಸಿ: ದಸಂಸ

Update: 2020-01-29 14:32 GMT

ಬೆಂಗಳೂರು, ಜ. 29: ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅವಕಾಶ ನೀಡದೆ, ಜಾತಿ ಅಸಮಾನತೆ ತೋರಿಸಿರುವುದು ಖಂಡನೀಯ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದಿಂದ ರುದ್ರಭೂಮಿ ಅಭಿವೃದ್ಧಿಗೆ ಲಕ್ಷಾಂತರ ರೂ.ಗಳ ಅನುದಾನ ಪಡೆದು ಅಭಿವೃದ್ಧಿಪಡಿಸಿದ ಜಾಗದಲ್ಲಿಯೇ ಈ ರೀತಿಯ ದೌರ್ಜನ್ಯ, ದಬ್ಬಾಳಕೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ‘ಹಿಂದೂ ನಾವೆಲ್ಲ ಒಂದು’ ಎಂದು ಧರ್ಮದ ಗುತ್ತಿಗೆ ತೆಗೆದುಕೊಂಡಿರುವ ಆರೆಸೆಸ್ಸ್, ಬಿಜೆಪಿ ಮತ್ತು ಸಂಘ ಪರಿಹಾರದವರು ಬಾಯಿ ಮುಚ್ಚಿಕೊಂಡಿರುವುದನ್ನು ನೋಡಿದರೆ ಇವರ ನಿಜಬಣ್ಣ ಬಯಲಾಗಿದೆ ಎಂದು ಟೀಕಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಸೇರಿ ಕರಾವಳಿಯಲ್ಲಿ ಸಂಘ ಪರಿವಾರ ಬಲಿಷ್ಠವಾಗಿದ್ದು, ಈ ರೀತಿಯ ದೌರ್ಜನ್ಯ ನಡೆದಿರುವುದನ್ನು ಪ್ರಶ್ನಿಸಬೇಕಿದೆ. ನಿಜವಾದ ದೇಶ ಭಕ್ತರು ನಾವೇ ಎಂದು ಹೇಳಿಕೊಳ್ಳುವವರು ದಲಿತರೇನು ಮನುಷ್ಯರಲ್ಲವೇ? ನೀವು ನಿಜಕ್ಕೂ ದೇಶಭಕ್ತರೇ ಆಗಿದ್ದರೆ ಹಳ್ಳಿಗೆ ಹೋಗಿ ದಲಿತರಿಗೆ ಸ್ಮಶಾನದ ಜಾಗ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೇಣುಕಾಚಾರ್ಯ ಬಂಧಿಸಿ: ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ರೇಣುಕಾಚಾರ್ಯ ವಿರುದ್ಧ ಕೂಡಲೇ ಎಸ್ಸಿ- ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಲಕ್ಷ್ಮಿನಾರಾಯಣ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News