‘ಕಾವೇರಿ’ ತೊರೆದ ಸಿದ್ದರಾಮಯ್ಯ: ನೂತನ ನಿವಾಸದಲ್ಲಿ ಪೂಜೆ

Update: 2020-01-29 15:15 GMT

ಬೆಂಗಳೂರು, ಜ.29: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ‘ಕಾವೇರಿ’ ನಿವಾಸದಲ್ಲಿ ವಾಸವ್ಯ ಹೂಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಾಂಧಿ ಭವನದ ಹಿಂಭಾಗದಲ್ಲಿರುವ ಕುಮಾರಪಾರ್ಕ್ ಪೂರ್ವದ ತಮ್ಮ ಅದೃಷ್ಟದ ಮನೆಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಇಂದು ತಮ್ಮ ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನೂತನ ನಿವಾಸದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಕಾವೇರಿ ನಿವಾಸವನ್ನು ತೆರವುಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. ಈ ವೇಳೆ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಹೆಸರಿನಲ್ಲಿ ‘ಕಾವೇರಿ’ ನಿವಾಸವನ್ನು ಪಡೆದುಕೊಂಡು ಸಿದ್ದರಾಮಯ್ಯ ತಮ್ಮ ವಾಸ್ತವ್ಯ ಮುಂದುವರೆಸಿದ್ದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ‘ಕಾವೇರಿ’ ನಿವಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಡೆಯಲು ಇಚ್ಛೆ ವ್ಯಕ್ತಪಡಿಸಿ, ಸಿದ್ದರಾಮಯ್ಯಗೆ ಬೇರೆ ನಿವಾಸವನ್ನು ಗುರುತಿಸಿದ್ದರು. ಆದರೆ, ಸಿದ್ದರಾಮಯ್ಯ ಮಾತ್ರ ಕಾವೇರಿ ನಿವಾಸವನ್ನು ಬಿಡಲು ಸಿದ್ಧರಿರಲಿಲ್ಲ. ಆದರೆ, ಇದೀಗ ಅಂತಿಮವಾಗಿ ಸಿದ್ದರಾಮಯ್ಯ, ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಮೇಲೆ ಆಕ್ರೋಶ: ನೂತನ ನಿವಾಸದಲ್ಲಿ ನಡೆಯುತ್ತಿರುವ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿದ್ದರಾಮಯ್ಯರನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿ, ಅಲ್ಲಿಂದ ತೆರಳುವಂತೆ ಸೂಚಿಸಿದ ಘಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News