ಅಲೆಮಾರಿ ಅಭಿವೃದ್ಧಿ ನಿಗಮ ರಚಿಸಬೇಕು: ಡಾ.ಬರಗೂರು ರಾಮಚಂದ್ರಪ್ಪ

Update: 2020-01-29 15:18 GMT

ಬೆಂಗಳೂರು, ಜ.29: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಅನಿಕೇತನ ಇದ್ದಂತೆ, ಪ್ರತ್ಯೇಕವಾದ ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮ ರಚನೆ ಮಾಡುವ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.

ಬುಧವಾರ ನಗರದ ಕೆ.ಆರ್. ರಸ್ತೆಯಲ್ಲಿರುವ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಆಯೋಗದಿಂದ ನ್ಯಾ. ಎಚ್.ಎಸ್. ನಾಗಮೋಹನ್ ಆಯೋಗಕ್ಕೆ ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗ(ಒಬಿಸಿ)ದಲ್ಲಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳನ್ನು ಒಟ್ಟಾಗಿ ಸೇರಿಸಿ ಪ್ರತ್ಯೇಕವಾದ ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮ ರಚಿಸಬೇಕು. ಯಾವುದೇ ಸಮುದಾಯಕ್ಕೆ ತಾರತಮ್ಯ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಇಂತಹ ನಿಗಮದ ಅವಶ್ಯಕತೆ ಇದೆ ಎಂದರು.

ಅಲೆಮಾರಿಗಳಿಗೆ ಸರಿಯಾದ ನೆಲೆ ಇಲ್ಲದಿರುವುದರಿಂದ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಸಮುದಾಯಗಳು ಕೂಡ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವತ್ತ ಗಮನ ನೀಡಬೇಕಾಗಿದೆ ಎಂದ ಅವರು, ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕಾದರೆ ಮೀಸಲಾತಿ ಅಗತ್ಯವಿದೆ. ಪ್ರಸ್ತುತ ದೇಶದಲ್ಲಿರುವ ಶೇ.70ರಷ್ಟು ಅರ್ಹರಿಗೆ ಮೀಸಲಾತಿ ದೊರೆಯುತ್ತಿಲ್ಲ. ಮೀಸಲಾತಿ ಸಮರ್ಪಕ ಅನುಷ್ಠಾನವಾದರೆ ಅಲೆಮಾರಿಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಡಾ. ಎಲ್.ಹನುಮಂತಯ್ಯ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡದ ರೀತಿಯಲ್ಲಿ ಅಲೆಮಾರಿ ಸಮುದಾಯವನ್ನು ಕೂಡ ಒಂದು ವರ್ಗವಾಗಿ ಪರಿಗಣಿಸುವ ಅನಿವಾರ್ಯತೆ ಇದ್ದು, ರಾಷ್ಟ್ರ ಹಾಗೂ ರಾಜ್ಯ ಸರಕಾರಗಳು ಮೀಸಲಾತಿ ಕುರಿತು ಮರು ಚಿಂತನೆ ಹಾಗೂ ಪುನರ್ ರಚನೆ ಮಾಡಬೇಕಿದೆ. ಈ ಮೂಲಕ ನೆಲೆ ಇಲ್ಲದ ಸಮುದಾಯಗಳಿಗೆ ನೆಲೆ ಕಲ್ಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಅಹವಾಲು ಪತ್ರವನ್ನು ಪರಿಶಿಷ್ಟ ಜಾತಿ-ಪಂಗಡ ಸಮುದಾಯಗಳಿಗೆ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾ. ಎಚ್.ಎಸ್.ನಾಗಮೋಹನ್ ದಾಸ್ ಸ್ವೀಕರಿಸಿದರು.

ಮಹಾಸಭಾ ಅಧ್ಯಕ್ಷ ಬಾಲಗುರುಮೂರ್ತಿ, ನಟ ಚೇತನ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ವಕೀಲ ಅನಂತನಾಯ್ಕ, ಕುಳುವ ಸಮುದಾಯದ ಅಧ್ಯಕ್ಷೆ ಸುಗುಣಾ, ಆಯೋಗದ ಸದಸ್ಯ ಕಾರ್ಯದರ್ಶಿ ಸಬೀರ್ ಅಹ್ಮದ್ ಮುಲ್ಲಾ ಸೇರಿದಂತೆ ಪ್ರಮುಖರಿದ್ದರು.

ಸಮುದಾಯದ ಪ್ರಮುಖ ಬೇಡಿಕೆಗಳು

* ಅರ್ಹರಿಗೆ ಜಾತಿ ಪ್ರಮಾಣ ನೀಡುವಲ್ಲಿ ಆಗುತ್ತಿರುವ ತಾರತಮ್ಯ ತಡೆಯಬೇಕು

* ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು

* ಸಮುದಾಯದಲ್ಲಿ ಸುಮಾರು 78 ಜಾತಿಗಳಿದ್ದು, ಅವುಗಳನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ. ಪರ್ಯಾಯ ಪದಗಳ ಗೊಂದಲ ನಿವಾರಣೆಯಾಗಬೇಕು.

* ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸಮರ್ಪಕವಾಗಿ ಪ್ರತಿವರ್ಷ ಖರ್ಚು ಮಾಡಬೇಕು

ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ಹಾಗೂ ಸಮುದಾಯದ ಸ್ಥಿತಿಗತಿಗಳನ್ನು ತಿಳಿಯುವುದಕ್ಕಾಗಿ ಅಧ್ಯಯನ ಮಾಡಲಾಗುತ್ತಿದ್ದು, ಆಯೋಗದ ಇತಿಮಿತಿಯಲ್ಲಿ ಸರಿಪಡಿಸುವ ಪ್ರಯತ್ನ ಮಾಡಲಾಗುವುದು.

-ನ್ಯಾ.ಎಚ್.ಎಸ್.ನಾಗಮೋಹನ್ ದಾಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News