ದಿಲ್ಲಿ: ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಸಲು ಜನರ ಆದ್ಯತೆ

Update: 2020-01-29 16:17 GMT

ಹೊಸದಿಲ್ಲಿ, ಜ.29: ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸಾಧನೆಯ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ದಿಲ್ಲಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸೌಲಭ್ಯ ಹೆಚ್ಚಿದ್ದು 61% ಜನತೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಇಚ್ಚಿಸುತ್ತಾರೆ ಎಂದು ತಿಳಿದು ಬಂದಿದೆ.

ಸಮೀಕ್ಷೆಯ ವರದಿಯನ್ನು ನೇತಾ ಆ್ಯಪ್ ಬುಧವಾರ ಬಿಡುಗಡೆಗೊಳಿಸಿದ್ದು, ಜನವರಿ 20ರಿಂದ 27ರ ಅವಧಿಯಲ್ಲಿ ದಿಲ್ಲಿಯ ಎಲ್ಲಾ 70 ಕ್ಷೇತ್ರಗಳ 40,000ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಆಪ್ ಸರಕಾರದ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ದಿಲ್ಲಿಯ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದ ಬಗ್ಗೆ 76% ಜನ ತೃಪ್ತಿ ಸೂಚಿಸಿದ್ದರೆ, ಸರಕಾರಿ ಶಾಲೆಗಳಲ್ಲಿರುವ ಮೂಲಸೌಕರ್ಯಗಳ ಬಗ್ಗೆ 84% ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ದಿಲ್ಲಿಯ ಸರಕಾರಿ ಶಾಲೆಗಳ ಶಿಕ್ಷಣದಲ್ಲಿ ಅದ್ಭುತ ಸುಧಾರಣೆ ಆಗಿರುವುದಾಗಿ 82% ಜನ ಹೇಳಿದ್ದಾರೆ.

2015ರಲ್ಲಿ ಬಿಜೆಪಿ ಪಾಲಾಗಿದ್ದ ರೋಹಿಣಿ ಮತ್ತು ವಿಶ್ವಾಸ್ ನಗರ ಕ್ಷೇತ್ರದ ಜನತೆಯೂ ಆಪ್ ಸರಕಾರದ ಸಾಧನೆಗೆ ಮೆಚ್ಚುಗೆ ಸೂಚಿಸಿರುವುದು ಗಮನಾರ್ಹವಾಗಿದೆ. ಆರೋಗ್ಯಕ್ಷೇತ್ರದಲ್ಲೂ ಕೇಜ್ರೀವಾಲ್ ನೇತೃತ್ವದ ಸರಕಾರದ ಸಾಧನೆ ಜನಮೆಚ್ಚುಗೆ ಗಳಿಸಿದೆ. ಆಪ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಿಲ್ಲಿಯಲ್ಲಿ ಆರೋಗ್ಯಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗುತ್ತಿವೆ ಎಂದು 80% ಜನ ಹೇಳಿದ್ದಾರೆ.

ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ದೊರಕುತ್ತಿರುವ ಸೇವೆಗಳ ಗುಣಮಟ್ಟ ಉತ್ತಮವಾಗಿದೆ ಎಂದು 69% ಜನ ಹೇಳಿದ್ದಾರೆ. ಮೊಹಲ್ಲಾ ಕ್ಲಿನಿಕ್‌ಗಳಿಗೆ ತಾವು ಇದುವರೆಗೆ ಹೋಗಿಲ್ಲ ಎಂದು 68% ಜನ ಹೇಳಿದ್ದರೆ, 25%ದಷ್ಟು ಜನ ಒಮ್ಮೆ ಭೇಟಿ ನೀಡಿದ್ದಾರೆ. 7% ಜನ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News