ಫಲಾನುಭವಿಗಳ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ: ಸಚಿವ ಆರ್.ಅಶೋಕ್

Update: 2020-01-29 16:34 GMT

ಬೆಂಗಳೂರು, ಜ. 29: ವೃದ್ಧಾಪ್ಯ ವೇತನಕ್ಕಾಗಿ ಅರ್ಜಿಯನ್ನು ಹಿಡಿದು ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಆಧಾರ್ ಕಾರ್ಡ್ ಆಧರಿಸಿ ವೃದ್ಧಾಪ್ಯ ವೇತನವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೆ ಸರಕಾರ ಜಾರಿಗೆ ತರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ಧಾಪ್ಯ ವೇತನಕ್ಕೆ ಇನ್ನು ಯಾರೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. 60 ವರ್ಷ ತುಂಬಿದ ವೃದ್ಧರನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಿ, ನೇರವಾಗಿ ಸರಕಾರವೇ ವೃದ್ಧಾಪ್ಯ ವೇತನವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಿದೆ ಎಂದು ಹೇಳಿದರು.

ಉಡುಪಿಯಿಂದಲೇ ಆರಂಭ: ಉಡುಪಿಯಿಂದ ಈ ನೂತನ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು, ಅನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಉಡುಪಿಯಲ್ಲಿ ಮೂರ ಸಾವಿರ ವೃದ್ಧಾಪ್ಯ ವೇತನ ಫಲಾನುಭವಿಗಳ ಆದೇಶ ಪತ್ರವನ್ನು ನಾನೇ ಅಂಚೆ ಪೆಟ್ಟಿಗೆಗೆ ಹಾಕಲಿದ್ದೇನೆ ಎಂದು ವಿವರ ನೀಡಿದರು.

ಅಧಿಕಾರಿಗಳೇ ಹಳ್ಳಿಗೆ ಹೋಗಿ: ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆ ವ್ಯಾಪ್ತಿಯ ಹಳ್ಳಿಯೊಂದಕ್ಕೆ ತಿಂಗಳಲ್ಲಿ ಒಂದು ಬಾರಿ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಪರಿಹರಿಸಲಿದ್ದಾರೆ. ಜಿಲ್ಲಾಧಿಕಾರಿಗಳೆ ಹಳ್ಳಿಗೆ ನಡೆಯಿರಿ ಎಂಬ ನೂತನ ಕಾರ್ಯಕ್ರಮ ಆರಂಭ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಿಂಗಳ ಮೂರನೆ ಶನಿವಾರ ಈ ಕಾರ್ಯಕ್ರಮ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಿಸಿಗಳ ಜೊತೆ ಉಪ ವಿಭಾಗಾಧಿಕಾರಿ, ತಹಶೀಲ್ದಾರರು ತೆರಳಲಿದ್ದಾರೆ. ಅನಂತರದ ಹಂತದಲ್ಲಿ ಉಪ ವಿಭಾಗಾಧಿಕಾರಿಗಳು ತಿಂಗಳಲ್ಲಿ 2 ದಿನ, ತಹಶೀಲ್ದಾರರು ನಾಲುಕ ದಿನ ಹಳ್ಳಿಗಳತ್ತ ತೆರಳಬೇಕೆಂಬ ಬಗ್ಗೆಯೂ ಚಿಂತನೆ ಇದ್ದು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಬಾಲ್ಯ ವಿವಾಹದ ಬಗ್ಗೆ ಅರಿವು, ಸ್ಮಶಾನಕ್ಕೆ ಜಾಗ ಮೀಸಲು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು, ಪೌತಿ ಖಾತೆ, ಜಾತಿ ಪ್ರಮಾಣಪತ್ರ ಮತ್ತಿತರ ಕಾರ್ಯಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗುವುದು. ಶೇ.90ರಷ್ಟು ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಈ ವೇಳೆ ಮಾಡಲಿದ್ದು ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ರವಾನಿಸಲಾಗುವುದು ಎಂದರು.

ಕಂದಾಯ ಇಲಾಖೆ ಜನಸ್ನೇಹಿ ಆಗಬೇಕು. ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ ಕಾರ್ಯಕ್ರಮದಲ್ಲಿ ನಾನೂ ಒಂದು ಜಿಲ್ಲೆಯಲ್ಲಿ ಪಾಲ್ಗೊಳ್ಳುತ್ತೇನೆ. ಯಾವ ಜಿಲ್ಲೆ ಎಂಬುದನ್ನು ಶೀಘ್ರ ನಿರ್ಧರಿಸಲಾಗುವುದು ಎಂದು ಅಶೋಕ್ ಇದೇ ವೇಳೆ ಸ್ಪಷ್ಟನೆ ನೀಡಿದರು.

ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ತ್ವರಿತವಾಗಿ ಮನೆ ನಿರ್ಮಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. 3 ತಿಂಗಳೊಳಗೆ ಮನೆ ನಿರ್ಮಿಸಿಕೊಡಬೇಕೆಂದು ಗಡುವು ನೀಡಲಾಗಿದೆ. ಮನೆ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ ಎಂದರು.

ಮನೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದೇನೆ ಎಂದ ಅವರು, ಪಿಡಿಓಗಳಿಗೆ 10ರಿಂದ 20 ಮನೆಗಳ ನಿರ್ಮಾಣದ ಮೇಲ್ವಿಚಾರಣೆಯ ಹೊಣೆ ವಹಿಸಲಾಗಿದೆ. ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ತಕ್ಷಣ ಅಮಾನತು ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.

ಜನಗಣತಿ

ಎಪ್ರಿಲ್ 15 ರಿಂದ ಮೇ 29ರ ವರೆಗೆ ಜನಗಣತಿ ಕಾರ್ಯ ರಾಜ್ಯದಲ್ಲಿ ನಡೆಯಲಿದೆ. ಮೊಬೈಲ್ ಆ್ಯಪ್ ಮೂಲಕ ದೇಶದಲ್ಲಿ ನಡೆಯುತ್ತಿರುವ ಮೊದಲ ಗಣತಿ ಇದಾಗಿದೆ. ಇದು ಸಂಪೂರ್ಣ ಕಾಗದರಹಿತ ಪ್ರಕ್ರಿಯೆಯಾಗಿದೆ’

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News