ಆ್ಯಂಬಿಡೆಂಟ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ: ಹೈಕೋರ್ಟ್‌ಗೆ ಹೇಳಿಕೆ

Update: 2020-01-29 16:44 GMT

ಬೆಂಗಳೂರು, ಜ.29: ಆ್ಯಂಬಿಡೆಂಟ್ ಕಂಪೆನಿ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ. 

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ದೇವರಜೀವನಹಳ್ಳಿಯಲ್ಲಿ ಆ್ಯಂಬಿಡೆಂಟ್ ಕಂಪೆನಿ ತೆರೆದಿದ್ದ ಫರೀದ್ ಎಂಬಾತ, ಅಧಿಕ ಬಡ್ಡಿಯ ಆಮಿಷವೊಡ್ಡಿ 15 ಸಾವಿರಕ್ಕೂ ಹೆಚ್ಚು ಜನರಿಂದ 600 ಕೋಟಿ ಹಣ ಹೂಡಿಸಿಕೊಂಡು ವಂಚಿಸಿದ್ದ. ಈ ಪ್ರಕರಣದಲ್ಲಿ ಬಂಧನವಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ಮಾಜಿ ಸಚಿವ ಜನಾರ್ದನರೆಡ್ಡಿ, ಫರೀದ್‌ನಿಂದ 20 ಕೋಟಿ ರೂ.ಪಡೆದಿದ್ದ ಎನ್ನಲಾಗಿತ್ತು. ಇದರ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿದ್ದರು. ಅರ್ಜಿದಾರರು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿದ್ದರು.

ಬುಧವಾರ ಆ್ಯಂಬಿಡೆಂಟ್ ಕಂಪೆನಿಯ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದಾಗಿ ರಾಜ್ಯ ಸರಕಾರ ನ್ಯಾಯಪೀಠಕ್ಕೆ ತಿಳಿಸಿತು. ನ್ಯಾಯಪೀಠವು ವಕೀಲರ ವಾದ ಆಲಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News