ಕೇಂದ್ರದ ಬಿತ್ತನೆ ಬೀಜ ಮಸೂದೆ ಖಾಸಗಿ ಕಂಪೆನಿಗಳ ಏಕಸ್ವಾಮ್ಯತೆಗೆ ದಾರಿ: ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ

Update: 2020-01-29 16:52 GMT

ಬೆಂಗಳೂರು, ಜ.29: ಬಿತ್ತನೆ ಬೀಜಗಳ ಮಸೂದೆ-2019ಅನ್ನು ಕೇಂದ್ರ ಸರಕಾರ ಸಿದ್ಧಪಡಿಸಿದ್ದು, ಇದು ಖಾಸಗಿ ಕಂಪನಿಗಳ ಏಕಸ್ವಾಮ್ಯತೆಗೆ ದಾರಿ ಮಾಡಿಕೊಡಲಿದೆ ಎಂದು ಕೃಷಿ ತಜ್ಞ ಡಾ.ಪ್ರಕಾಶ ಕಮ್ಮರಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಬೀಜ ಮಸೂದೆ- 2019 ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿತ್ತನೆ ಬೀಜಗಳ ಬೆಲೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಎಂಬುದು ರೈತ ಸಮುದಾಯದ ಬೇಡಿಕೆಯಾಗಿತ್ತು. 1966ರ ಬಿತ್ತನೆ ಬೀಜ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ಹೊಸ ಬಿತ್ತನೆ ಬೀಜ ಮಸೂದೆಯಲ್ಲಿ ಬೆಲೆ ನಿಯಂತ್ರಣಕ್ಕೆ ಅವಕಾಶ ನೀಡಲಾಗುತ್ತದೆಂದು ನಾವೆಲ್ಲರೂ ನಿರೀಕ್ಷಿಸಿದ್ದೆವು. ಆದರೆ, 2019ರ ಮಸೂದೆಯಲ್ಲೂ ಬಿತ್ತನೆ ಬೀಜದ ಬೆಲೆಯನ್ನು ನಿಯಂತ್ರಿಸಲು ಅವಕಾಶವಿಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯಾವುದೇ ಕಂಪನಿ ಬೀಜ ಮಾರುಕಟ್ಟೆಗೆ ಬರುವ ಮುನ್ನ ರೈತರ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದೊಳಗೆ ಪರೀಕ್ಷೆ ನಡೆಸಬೇಕು ಹಾಗೂ ಯಾರೇ ನೂತನ ತಳಿ, ಬೀಜ ಉತ್ಪಾದನೆ ಮಾಡಲಿ, ಅದನ್ನು ಕಡ್ಡಾಯವಾಗಿ, ನೋಂದಣಿ ಮಾಡಬೇಕು. ಇದರಿಂದ ಕಳವು, ದುರ್ಬಳಕೆ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದರು.

ಬಿತ್ತನೆ ಬೀಜವು ಮೊಳಕೆ ಒಡೆಯದಿದ್ದಲ್ಲಿ ಮತ್ತು ಬೆಳೆ ಬಂದರೂ, ಕಂಪನಿ ಹೇಳಿದಷ್ಟು ಇಳುವರಿ ಬರದೇ ಇದ್ದಲ್ಲಿ ಬಿತ್ತನೆ ಬೀಜವು ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಬಿತ್ತನೆ ಬೀಜದ ಕಂಪನಿಯನ್ನು ಹೊಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ ನೂತನ ಮಸೂದೆಯಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಅವರು ಬೇಸರ ವಕ್ತಪಡಿಸಿದರು.

ಹಿರಿಯ ವಿಜ್ಞಾನಿ ಡಾ.ಶರಣ್ ಅಂಗಡಿ ಮಾತನಾಡಿ, ಬಿತ್ತನೆ ಬೀಜಗಳ ಮಸೂದೆ-2019 ಯಿಂದ ರೈತರಿಗೆ ಅನುಕೂಲವೇ ಹೆಚ್ಚು. ಆದರೆ, ತಿಳುವಳಿಕೆ ಇಲ್ಲದ ಕಾರಣ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಬೀಜ ಸಂಶೋಧನೆ ಸೇರಿದಂತೆ ಹಲವು ಪೂರಕ ಅಂಶಗಳು ಇದರಲ್ಲಿದೆ ಎಂದರು.

ಈ ಸಂದರ್ಭದಲ್ಲಿ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಪ್ರೊ.ಎಂ.ಕೆ.ರಮೇಶ್, ವಿ.ಗಾಯತ್ರಿ, ರೈತ ಮುಖಂಡ ಬಸವರಾಜು ಸೇರಿದಂತೆ ಪ್ರಮುಖರಿದ್ದರು.

ಬೀಜ ಬ್ಯಾಂಕ್ ಸ್ಥಾಪಿಸಿ

ರಾಜ್ಯದ ಪ್ರತಿಯೊಂದು ಪಂಚಾಯತ್ ನಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಬೇಕು. ಇದರಿಂದ ಪಂಚಾಯತ್ ವ್ಯಾಪ್ತಿಯಲ್ಲಿನ ರೈತರಿಗೆ ಅನುಕೂಲವಾಗುವ ಜೊತೆಗೆ ಬೀಜ ರಕ್ಷಣೆ ಆಗಲಿದೆ. ಆದರೆ, ದೇಶಕ್ಕೆಲ್ಲಾ ಒಂದೇ ಕಂಪನಿ ಬೀಜ ವಿತರಣೆ ಮುಂದಾಗುವುದು ಸರಿಯಲ್ಲ.

-ಕೋಡಿಹಳ್ಳಿ ಚಂದ್ರಶೇಖರ, ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News