ಬಹುಮಹಡಿ ವಾಹನ ನಿಲುಗಡೆ ತಾಣ ಕಾಮಗಾರಿ ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣ: ಮೇಯರ್ ಗೌತಮ್ ಕುಮಾರ್

Update: 2020-01-29 18:39 GMT

ಬೆಂಗಳೂರು, ಜ.29: ನಗರದ ರಿಚ್ಮಂಡ್ ವತ್ತ, ಸ್ವಾತಂತ್ರ ಉದ್ಯಾನದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ ತಾಣಕ್ಕೆ ಮೇಯರ್ ಗೌತಮ್ ಕುಮಾರ್ ಬುಧವಾರ ಭೇಟಿ ನೀಡಿ ತಪಾಸಣೆ ನಡೆಸಿದರು.

ರಿಚ್ಮಂಡ್ ವೃತ್ತವು ಬೆಂಗಳೂರು ಕೇಂದ್ರ ಭಾಗದ ಪ್ರಮುಖ ಸ್ಥಳವಾಗಿದೆ. ಜೊತೆಗೆ ಪಾಲಿಕೆಗೆ ಹತ್ತಿರ ಹಾಗೂ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತವಾಗಿದ್ದು, ಅದನ್ನು ಕೂಡಲೇ ಸುಂದರೀಕರಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ರಿಚ್ಮಂಡ್ ವೃತ್ತದ ಲೆಕ್ಸಸ್ ಬೆಂಗಳೂರು ಮುಂಭಾಗ ಬಿದ್ದಿರುವ ರಸ್ತೆ ಗುಂಡಿ ಮುಚ್ಚಬೇಕು, ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಕಂಬ ಹಾಗೂ ಕಲ್ಲುಗಳನ್ನು ಕೂಡಲೆ ತೆರವುಗೊಳಿಸಬೇಕು. ಜೊತೆಗೆ ವೃತ್ತದ ಸುತ್ತಮುತ್ತಲಿನ ಪ್ರದೇಶ, ಜಂಕ್ಷನ್, ಮೇಲ್ಸೇತುವೆಯ ಕೆಳಭಾಗವನ್ನು ಕೂಡಲೆ ಸ್ವಚ್ಛಗೊಳಿಸಬೇಕು. ವೃತ್ತವನ್ನು ಸುಂದರೀಕರಣಗೊಳಿಸುವ ದೃಷ್ಟಿಯಿಂದ ವೃತ್ತವನ್ನು ದಿ ಅಡಾಪ್ಟ್ ಸ್ಟ್ರೀಟ್ ಅಡಿ ದತ್ತು ನೀಡಿ ಸದಾ ಸುಂದರವಾಗಿರುವಂತೆ ನೋಡಿಕೊಳ್ಳಬೇಕು. ಈ ಪೈಕಿ ಕೂಡಲೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಓಎಫ್‌ಸಿ ಕೇಬಲ್ ತೆರವು: ರಿಚ್ಮಂಡ್ ವೃತ್ತದ ಬಳಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್ ಗಳನ್ನು ತೆರವುಗೊಳಿಸಲಾಯಿತು. ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್ ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು. ಈ ರೀತಿಯ ಅನಧಿಕತ ಕೇಬಲ್ ಮತ್ತೆ ಮರುಕಳಿಸಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹುಮಹಡಿ ವಾಹನ ನಿಲುಗಡೆ ತಾಣ ತಪಾಸಣೆ: ಬಹುಮಹಡಿ ವಾಹನ ನಿಲುಗಡೆ ತಾಣ ತಪಾಸಣೆ ನಡೆಸಿದ ಮೇಯರ್, ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು. ಅದಕ್ಕೆ ಅಧಿಕಾರಿಯೊಬ್ಬರು ಪ್ರತಿಕ್ರಿತಿಸಿ, ಬಹುಮಹಡಿ ವಾಹನ ನಿಲುಗಡೆ ತಾಣವನ್ನು ನಗರೋತ್ಥಾನ ಗ್ರಾಂಟ್ಸ್ ಅಡಿ 79.81 ಕೋಟಿ ರೂ. ವೆಚ್ಚದಲ್ಲಿ ತಳಭಾಗದಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗಿದ್ದು(-1, -2, -3), 553 ಕಾರು, 445 ದಿಚಕ್ರ ಚಾಹನ ನಿಲುಗಡೆ ಮಾಡಬಹುದಾಗಿದೆ. ಕಟ್ಟಡದಲ್ಲಿ 4 ಲಿಫ್ಟ್‌ಗಳು ಹಾಗೂ 34 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಟ್ಟಡ ಮೇಲ್ಭಾಗದಲ್ಲಿ ಪ್ರತಿಭಟನೆ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಮಾರ್ಚ್ ತಿಂಗಳಾಂತ್ಯಕ್ಕೆ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಪಾಸಣೆ ವೇಳೆ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಪಾಲಿಕೆ ಸದಸ್ಯೆ ಲತಾ ರಾಥೋಡ್, ಜಂಟಿ ಆಯುಕ್ತರಾದ ಪಲ್ಲವಿ, ಚಿದಾನಂದ್, ಪ್ರಧಾನ ಅಭಿಯಂತರ ಎಂ.ಆರ್. ವೆಂಕಟೇಶ್, ಮುಖ್ಯ ಅಭಿಯಂತರ ರಮೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಗರೋತ್ಥಾನ ಗ್ರಾಂಟ್ಸ್ ಅಡಿ 79.81 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣವನ್ನು ನಿರ್ಮಿಸಲು 2015 ರಲ್ಲಿ ಕಾರ್ಯಾದೇಶ ನೀಡಲಾಗಿದೆ. ಆದರೆ, ಸ್ಥಳದಲ್ಲಿ ಬಂಡೆ ಸಿಕ್ಕಿದ್ದ ಪರಿಣಾಮ ಕಾಮಗಾರಿ ವಿಳಂಬವಾಗಿದೆ. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ಕಾಮಗಾರಿ ಮುಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಹುಮಹಡಿ ನಿಲ್ದಾಣ ತಾಣ ಆಕರ್ಷಣೀಯವಾಗಿ ಕಾಣಲು ಕಟ್ಟಡವನ್ನು ಹಸಿರೀಕರಣ ಮಾಡುವ ಯೋಜನೆಯೂ ಇದೆ. ಕಾಮಗಾರಿ ಪೂರ್ಣಗೊಂಡ ನಂತರ ಗಾಂಧಿನಗರ, ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಬಹುತೇಕ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಲಿದೆ.

-ಗೌತಮ್ ಕುಮಾರ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News