ಟಿಎಂಸಿಗೆ ಪ್ರಶಾಂತ್ ಕಿಶೋರ್ ಸೇರ್ಪಡೆ ವದಂತಿ: ಬಂಗಾಳದಲ್ಲಿ ಸಂಚಲನ

Update: 2020-01-30 04:07 GMT

ಕೊಲ್ಕತ್ತಾ, ಜ.30: ಸಂಯುಕ್ತ ಜನತಾ ದಳದಿಂದ ಬುಧವಾರ ಉಚ್ಚಾಟಿಸಲ್ಪಟ್ಟ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಈ ಸುದ್ದಿ ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ತೃಣಮೂಲ ಕಾಂಗ್ರೆಸ್ ನಾಯಕರು ಇಂಥ ಬೆಳವಣಿಗೆಯನ್ನು ದೃಢಪಡಿಸಿಲ್ಲವಾದರೂ, ಸದ್ಯದಲ್ಲೇ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲ. ಆದರೆ ಪ್ರಶಾಂತ್ ಕಿಶೋರ್ ಅವರನ್ನು ಈ ಬಗ್ಗೆ ಸಂಪರ್ಕಿಸಿ ದೃಢಪಡಿಸಿಕೊಳ್ಳುವ ಪ್ರಯತ್ನ ಸಫಲವಾಗಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಮತ್ತು ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ ಅವರ ನಡವಳಿಕೆಯು ಇತ್ತೀಚಿನ ದಿನಗಳಲ್ಲಿ ಅವರು ಪಕ್ಷದ ಶಿಸ್ತಿಗೆ ಬದ್ಧರಾಗಿಲ್ಲ ಎನ್ನುವುದನ್ನು ತೋರಿಸಿದೆ ಎಂದು ಹೇಳಿಕೆ ನೀಡಿ ಉಭಯ ಮುಖಂಡರನ್ನು ಬುಧವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಸಿಎಎ ಹಾಗೂ ಎನ್‌ಪಿಆರ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರಶಾಂತ್ ಕಿಶೋರ್ ಬಹಿರಂಗವಾಗಿಯೇ ಶ್ಲಾಘಿಸುತ್ತಾ ಬಂದಿರುವುದು, ಅವರು ಟಿಎಂಸಿ ಸೇರಲಿದ್ದಾರೆ ವದಂತಿಗೆ ಕಾರಣ. ಟಿಎಂಸಿ ಮೂಲಗಳ ಪ್ರಕಾರ, ಕಿಶೋರ್ ಅವರು ಬ್ಯಾನರ್ಜಿ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ.

"ಪ್ರಶಾಂತ್ ಕಿಶೋರ್ ಅವರು ಚುನಾವಣಾ ತಂತ್ರಗಾರರಾಗಿ ಪಕ್ಷಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಪಕ್ಷಕ್ಕೆ ಸೇರುವುದು ಅವರಿಗೆ ಮತ್ತು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2021ಕ್ಕೆ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಅವರು ಪಕ್ಷಕ್ಕೆ ಬಂದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗುವುದು ಎಂದು ಟಿಎಂಸಿ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕಳೆದ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಉಪಚುನಾವಣೆ ವೇಳೆ ಕಿಶೋರ್ ಅವರು ಟಿಎಂಸಿ ಪರವಾಗಿ ಕಾರ್ಯತಂತ್ರ ರೂಪಿಸಿದ್ದರು. ಆಗ ಎಲ್ಲ ಮೂರೂ ಸ್ಥಾನಗಳನ್ನು ಟಿಎಂಸಿ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News