ಪ್ರಧಾನಿ ಮೋದಿ ಮತ್ತು ನಾಥೂರಾಮ್ ಗೋಡ್ಸೆ ನಂಬುವ ಸಿದ್ಧಾಂತ ಒಂದೇ: ರಾಹುಲ್ ಗಾಂಧಿ

Update: 2020-01-30 08:04 GMT

ವಯನಾಡ್: ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೇರಳದ ವಯನಾಡ್ ನಲ್ಲಿ ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಸಿದ್ಧಾಂತ ಮತ್ತು ಗೋಡ್ಸೆಯ ಸಿದ್ಧಾಂತ ಎರಡೂ ಒಂದೇ ಆಗಿದೆ. ಇಬ್ಬರೂ ಒಂದೇ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದಾರೆ. ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ ತಾನು ಗೋಡ್ಸೆಯನ್ನು ನಂಬುತ್ತೇನೆ ಎನ್ನಲು ಮೋದಿಯವರಿಗೆ ಧೈರ್ಯವಿಲ್ಲ" ಎಂದು ಹೇಳಿದರು.

"ಇದು ನಿಮಗೆ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ, ಆದರೆ ನಾಥುರಾಮ್ ಗೋಡ್ಸೆ ಮಹಾತ್ಮನನ್ನು ಹೊಡೆದಾಗ ಆತ ಕಣ್ಣು ತೆರೆಯಲಿಲ್ಲ. ಅವನು ಏನು ಮಾಡಿದ್ದಾನೆಂದು ಅವನಿಗೆ ತಿಳಿದಿತ್ತು. ಗೋಡ್ಸೆ ಮತ್ತು ನರೇಂದ್ರ ಮೋದಿಯವರು ಒಂದೇ ಸಿದ್ಧಾಂತವನ್ನು ನಂಬುತ್ತಾರೆ,  ಆದರೆ ನರೇಂದ್ರ ಮೋದಿಗೆ  ತಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳಲು ಧೈರ್ಯವಿಲ್ಲ  "ಎಂದು ರಾಹುಲ್ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಲ್ಲಿ ಜನರನ್ನು ಉದ್ದೇಶಿಸಿ ಹೇಳಿದರು.

ವಯನಾಡ್  ಲೋಕಸಭಾ ಕ್ಷೇತ್ರದ  ಎಸ್‌ಕೆಎಂಜೆ ಪ್ರೌಢ ಶಾಲೆಯ ಬಳಿಯಿಂದ  ಪ್ರಾರಂಭವಾದ ಎರಡು ಕಿಲೋಮೀಟರ್ ಉದ್ದದ "ಸಂವಿಧಾನವನ್ನು ಉಳಿಸಿ" ಮೆರವಣಿಗೆಯಲ್ಲಿ ಸಹಸ್ರಾರು ಕಾರ್ಯಕರ್ತರು  ಭಾಗವಹಿಸಿದ್ದಾರೆ. ತಾನು ಭಾರತೀಯನೆಂದು ಸಾಬೀತುಪಡಿಸಲು ಯಾರ ಪ್ರಮಾಣಪತ್ರವೂ  ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ರ್ಯಾಲಿಯಲ್ಲಿ ಕೇರಳ ವಿಧಾನಸಭೆಯ ವಿಪಕ್ಷದ ನಾಯಕ ರಮೇಶ್ ಚೆನ್ನಿತಲಾ, ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಮತ್ತು ಎಐಸಿಸಿ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಭಾಗವಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News