ಪೌರತ್ವ ಕಾಯ್ದೆ ವಿರುದ್ಧದ ನಿರ್ಣಯ ತಡೆಹಿಡಿದ ಯುರೋಪ್ ಸಂಸತ್

Update: 2020-01-30 16:26 GMT

ಲಂಡನ್,ಜ.30: ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಐರೋಪ್ಯ ಸಂಸತ್ (ಇಪಿ)ನ ಸದಸ್ಯರು ಮಂಡಿಸಿದ್ದ ಐದು ಪ್ರತ್ಯೇಕ ನಿರ್ಣಯಗಳನ್ನು ಏಕೀಕರಿಸಿದ ಜಂಟಿ ಗೊತ್ತುವಳಿಯ ಮೇಲೆ ಬುಧವಾರ ಬ್ರಸೆಲ್ಸ್ ‌ನ ಪೂರ್ಣಾಧಿವೇಶನದಲ್ಲಿ ಚರ್ಚೆ ನಡೆದಿದ್ದು,ಗುರುವಾರ ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದ ಮತದಾನವನ್ನು ಮಾರ್ಚ್‌ ವರೆಗೆ ಮುಂದೂಡಲಾಗಿದೆ.

ಐರೋಪ್ಯ ಆಯೋಗದ ಉಪಾಧ್ಯಕ್ಷೆ ಹೆಲೆನಾ ಡಾಲಿ ಅವರ ಹೇಳಿಕೆಯೊಂದಿಗೆ ಚರ್ಚೆ ಆರಂಭಗೊಂಡಿತ್ತು. ಭಾರತದೊಂದಿಗೆ ಐರೋಪ್ಯ ಒಕ್ಕೂಟ (ಇಯು)ದ ಗಾಢ ಸಂಬಂಧವನ್ನು ಬಲವಾಗಿ ಬೆಂಬಲಿಸಿ ಮಾತನಾಡಿದ ಅವರು,15ನೇ ಭಾರತ-ಇಯು ಶೃಂಗಸಭೆಗಾಗಿ ಮಾರ್ಚ್‌ನಲ್ಲಿ ಬ್ರಸೆಲ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿಗದಿತ ಭೇಟಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಕಾನೂನು ಸಂವಿಧಾನಕ್ಕೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದು ಭಾರತದ ಸರ್ವೋಚ್ಚ ನ್ಯಾಯಾಲಯದ ಕೆಲಸವಾಗಿದೆ ಮತ್ತು ಈಗ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗಳು ದೇಶದಲ್ಲಿಯ ಉದ್ವಿಗ್ನತೆ ಮತ್ತು ಹಿಂಸಾಚಾರವನ್ನು ಶಮನಗೊಳಿಸಲಿದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.

ಇಬ್ಬರು ಭಾರತೀಯ ಮೂಲದ ಐರೋಪ್ಯ ಸಂಸತ್ ಸದಸ್ಯ(ಎಂಇಪಿ)ರಾದ ದಿನೇಶ ಧಮಿಜಾ ಮತ್ತು ನೀನಾ ಗಿಲ್ ಅವರು ಸೇರಿದಂತೆ ಹಲವಾರು ಸದಸ್ಯರು ಭಾರತದ ಪರವಾಗಿ ಮಾತನಾಡಿ,ಸಂಸದೀಯ ಗೊತ್ತುವಳಿಯಲ್ಲಿನ ಸಿಎಎ ಮತ್ತು ಎನ್‌ಆರ್‌ಸಿ ಸುತ್ತಲಿನ ತಪ್ಪು ಮಾಹಿತಿಯನ್ನು ಬೆಟ್ಟು ಮಾಡಿದರು.

ಫ್ರೆಂಚ್ ಎಂಇಪಿ ಥಿಯರಿ ಮರಿಯಾನಿ ಅವರು ಗೊತ್ತುವಳಿಯ ಮಂಡನೆಯಲ್ಲಿ ಪಾಕಿಸ್ತಾನದ ಕೈವಾಡವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರೆ,ಇತರರು ಇದು ಇನ್ನೊಂದು ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವಾಗಿದೆ ಎಂದು ಖಂಡಿಸಿದರು.

ಪಾಕಿಸ್ತಾನ ಮೂಲದ ಬ್ರಿಟಿಷ್ ಎಂಇಪಿ ಶಫೀಕ್ ಮುಹಮ್ಮದ್ ಹಾಗೂ ಇತರ ಕೆಲವು ಸದಸ್ಯರು,ಸಿಎಎ ಅನ್ನು ಅತ್ಯಂತ ತಾರತಮ್ಯದಿಂದ ಕೂಡಿದ ಕಾನೂನು ಎಂದು ಬಣ್ಣಿಸಿದರು. ಭಾರತದ ರಾಜತಾಂತ್ರಿಕ ಲಾಬಿಯ ಮುಂದೆ ಇಯು ಮಂಡಿಯೂರಿದೆ ಹಾಗೂ ಗೊತ್ತುವಳಿಯ ಮೇಲೆ ಮತದಾನವನ್ನು ಮಂದೂಡುವ ಮೂಲಕ ಮಾನವ ಹಕ್ಕುಗಳ ಕಳವಳಗಳಿಗಿಂತ ಹೆಚ್ಚಿನ ಆದ್ಯತೆಯನ್ನು ವ್ಯಾಪಾರ ಮತ್ತು ಉದ್ಯಮಾಸಕ್ತಿಗಳಿಗೆ ನೀಡಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೋಲಂಡ್ ಎಂಇಪಿ ರಿಸಾರ್ದ್ ಝಾರ್ನೆಕಿ ಅವರು,ಸಾಮಾನ್ಯ ಜ್ಞಾನ ಮತ್ತು ಗೌರವ ಇಂದು ಗೆದ್ದಿರುವ ಏಕಮಾತ್ರ ಲಾಬಿಯಾಗಿದೆ ಎಂದರು.

ಸಿಎಎ ಭಾರತದಲ್ಲಿ ವಿಚಾರಣಾಧೀನವಾಗಿರುವುದು ಮತದಾನವನ್ನು ಮುಂದೂಡಲು ಕಾರಣವಾಗಿದೆ ಎಂದು ಗೊತ್ತುವಳಿಯ ಹಿಂದಿನ ಗುಂಪುಗಳಲ್ಲೊಂದಾದ ಪ್ರೊಗ್ರೆಸಿವ್ ಅಲಯನ್ಸ್ ಆಫ್ ಸೋಷಿಯಲಿಸ್ಟ್ಸ್ ಆ್ಯಂಡ್ ಡೆಮಾಕ್ರಾಟ್ಸ್ ತಿಳಿಸಿದೆ.

ತನ್ಮಧ್ಯೆ ದಿಲ್ಲಿಯಲ್ಲಿನ ಸರಕಾರಿ ಮೂಲಗಳು,ಮತದಾನ ಮುಂದೂಡಿಕೆಯು ಭಾರತದ ರಾಜತಾಂತ್ರಿಕ ವಿಜಯವಾಗಿದೆ. ಇಯುನಲ್ಲಿ ಭಾರತದ ಸ್ನೇಹಿತರು ಪಾಕಿಸ್ತಾನದ ಸ್ನೇಹಿತರಿಗಿಂತ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News