ಮೋದಿ, ಶಾ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವ ಕಪಟಿಗಳು: ಸಿದ್ದರಾಮಯ್ಯ

Update: 2020-01-30 14:44 GMT

ಬೆಂಗಳೂರು, ಜ.30: ದೇಶದ ಇಂದಿನ ಸ್ಥಿತಿ, ಜಲಿಯನ್ ವಾಲಾಬಾಗ್‌ನಲ್ಲಿ ಜನರಲ್ ಡಯಾರ್ ನೂರಾರು ಜನರನ್ನು ಕೊಂದ ದಿನಗಳನ್ನು ನೆನಪಿಸುತ್ತಿದೆ. ಇದನ್ನು ಮುಂದುವರೆಯಲು ಬಿಟ್ಟರೆ ಜಾತಿ, ಧರ್ಮದ ಹೆಸರಲ್ಲಿ ದೇಶ ವಿಭಜನೆ ನಿಶ್ಚಿತ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಗುರುವಾರ ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯ ಪುತ್ಥಳಿಯ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ರೀತಿ ಆಗದಂತೆ ಕಾಂಗ್ರೆಸ್ ತಡೆಯಬೇಕು. ಗಾಂಧೀಜಿ ಅವರ ಕನಸಿನ ಭಾರತವನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಪ್ರಜಾಪ್ರಭುತ್ವ, ಸಂವಿಧಾನ, ಮನುಷ್ಯತ್ವದಲ್ಲಿ ನಂಬಿಕೆ ಇಲ್ಲದವರು ಹಿಟ್ಲರ್‌ನಂತೆ ಕ್ರೂರಿಗಳಾಗುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಮತ್ತವರ ಸಂತತಿಯೂ ಹಿಟ್ಲರ್‌ನಂತೆಯೇ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪರ-ವಿರೋಧವಾಗಿ ಮಾತನಾಡುವ ಕಪಟಿಗಳು ಇವರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಹೆಸರಲ್ಲಿ, ಸಂವಿಧಾನಕ್ಕೆ ವಿರುದ್ಧವಾಗಿ ಕಾಯ್ದೆಯಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಒಂದು ಧರ್ಮದ ಜನರನ್ನು ಹೊರ ಹಾಕುವ ಹುನ್ನಾರ ನಡೆಸಿದವರು ನಮ್ಮನ್ನು ದೇಶ ದ್ರೋಹಿಗಳು ಎಂದು ಕರೆಯುತ್ತಾರೆ. ಸಂವಿಧಾನ ವಿರೋಧಿ ಬಿಜೆಪಿಯವರೆ ನಿಜವಾದ ದೇಶದ್ರೋಹಿಗಳು ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಮತಾಂಧ ಶಕ್ತಿಗಳು ಗಾಂಧೀಜಿ ಅವರ ವಿಚಾರಗಳನ್ನು ಮೊದಲಿಂದಲೂ ವಿರೋಧಿಸುತ್ತಲೇ ಬಂದಿವೆ. ಅದೇ ಕೋಮುವಾದಿ ಶಕ್ತಿಗಳು ಇಂದೂ ಸಹ ದೇಶವನ್ನು ವಿಭಜಿಸಲು ಯತ್ನಿಸುತ್ತಿವೆ. ಬಹುತ್ವದ ಆಧಾರದ ಮೇಲೆ ಈ ದೇಶ ರಚನೆ ಆಗಿದೆ. ಸರ್ವ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ದೇಶದ ವಿಕಾಸಕ್ಕೆ ಅಗತ್ಯವಿರುವ ಎಲ್ಲ ಅಂಶಗಳನ್ನು ಅಳವಡಿಸಿ ಸಂವಿಧಾನವನ್ನು ರಚಿಸಲಾಗಿದೆ. ಗಾಂಧೀಜಿ ಅವರ ಸಂದೇಶ, ಅವರು ಪ್ರತಿಪಾದಿಸಿದ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಯಾವುದೇ ಸರಕಾರ ಎಷ್ಟೇ ಬಹುಮತದಲ್ಲಿ ಅಧಿಕಾರಕ್ಕೆ ಬಂದರೂ ಸಂವಿಧಾನದ ಮೂಲ ಆಶಯಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಗಾಂಧೀಜಿ ದೇಶದಲ್ಲಿ ಜಾತಿ ಧರ್ಮದ ಹೆಸರಲ್ಲಿ ಸಾಮರಸ್ಯ ಕದಡಿದಾಗ ಅಂತಹ ಸ್ಥಳಗಳಿಗೆ ನೇರವಾಗಿ ಭೇಟಿಯಾಗಿ ಅಲ್ಲಿ ಸಾಮರಸ್ಯ ಬೆಸೆಯುತ್ತಿದ್ದರು. ಇಂತಹ ವ್ಯಕ್ತಿಯನ್ನು ಹಿಂದೂ ಮಹಾಸಭಾ ಸಂಚು ಮಾಡಿ ಹತ್ಯೆ ಮಾಡುತ್ತದೆ. 6 ಬಾರಿ ಗಾಂಧೀಜಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇವರು ದೇಶದ್ರೋಹಿಗಳಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮಹಾತ್ಮ ಗಾಂಧಿ ದಕ್ಷಿಣಾ ಆಫ್ರಿಕಾದಲ್ಲಿಯ ಹೋರಾಟದ ಸ್ಪೂರ್ತಿಯನ್ನೆ ಭಾರತದಲ್ಲೂ ವಿಸ್ತರಿಸಿದರು. ಸತ್ಯಾಗ್ರಹದ ಮೂಲಕ ಅಹಿಂಸಾತ್ಮಕ ಹೋರಾಟಕ್ಕೆ ಕರೆ ನೀಡಿದರು. ಮನುಷ್ಯನ ಅಹಂಗಿಂತಲೂ ಮನುಷ್ಯತ್ವ ದೊಡ್ಡದು ಎಂದು ಸಾರಿದರು. ದೇಶದಲ್ಲಿ ಬ್ರಿಟಿಷರ ಆಡಳಿತ, ಸಾಮಾಜಿಕ ಪಿಡುಗುಗಳ ವಿರುದ್ಧ ಏಕಕಾಲಕ್ಕೆ ಹೋರಾಟ ನಡೆಸಿದರು ಎಂದರು.

ಸತ್ಯ, ಅಹಿಂಸೆಯ ಸಿದ್ಧಾಂತ, ಅನ್ವೇಷಣೆ ಹಾಗೂ ವಿಮರ್ಶಾ ಮನೋಭಾವನೆಯನ್ನ ಬೆಳೆಸಿಕೊಂಡಿದ್ದ ಮಹಾತ್ಮಾ ಗಾಂಧೀಜಿ, ಇಡೀ ಜಗತ್ತಿಗೆ ಆದರ್ಶ ವ್ಯಕ್ತಿತ್ವ. ‘ಸತ್ಯಾಗ್ರಹ’ ಪರಿಕಲ್ಪನೆಯನ್ನು ಕಟ್ಟಿಕೊಡುವ ಮೂಲಕ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಶ್ರೇಷ್ಠ ನಾಯಕರಾಗಿ ಹೊರ ಹೊಮ್ಮಿದ್ದರು ಎಂದು ಅವರು ಹೇಳಿದರು.

ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ನಾಯಕರು ಎಷ್ಟು ಬೇಕಾದರೂ ಸುಳ್ಳು ಹೇಳಬಹುದು, ಬೇರೆಯವರು ಸತ್ಯ ಹೇಳಿದರೂ ಅವರನ್ನು ತೇಜೋವಧೆ ಮಾಡಿ, ಅಪಹಾಸ್ಯ ಮಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ ಕೀಳಾಗಿ ಬಿಂಬಿಸಲಾಗುತ್ತದೆ. ಬಿಜೆಪಿ ತನ್ನ ಸಮರ್ಥನೆಗೆ ಎಂತಹ ಕೀಳಮಟ್ಟಕ್ಕಾದರೂ ಇಳಿಯುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಮಿತ್ ಶಾ ರಾಜೀನಾಮೆ ನೀಡಲಿ

ಗಾಂಧಿಯ ಹತ್ಯೆಯ ಈ ಕರಾಳ ದಿನದಂದೇ ಗೋಡ್ಸೆಯ ಸಂತತಿಗಳು ಹೆಚ್ಚುತ್ತಿವೆ. ಅದರಲ್ಲೂ ಪೊಲೀಸರ ಸಮ್ಮುಖದಲ್ಲೆ ಪ್ರತಿಭಟನಾನಿರತರ ಮೇಲೆ ಗುಂಡಿನ ದಾಳಿ ಮಾಡಿದಂತಹ ಅಪಾಯಕಾರಿ ಸಂಗತಿಗಳು ಸಮಾಜದ ಮೇಲಿನ ಭರವಸೆಯನ್ನು ಹಾಳು ಮಾಡುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವ ಗೃಹ ಸಚಿವ ಅಮಿತ್ ಶಾ ಕೂಡಲೆ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News