ಸೂರ್ಯನ ಮೊಟ್ಟಮೊದಲ ಅತ್ಯಧಿಕ ರೆಸೊಲ್ಯೂಷನ್‌ ನ ಚಿತ್ರಗಳ ಬಿಡುಗಡೆ

Update: 2020-01-30 16:24 GMT

ಬೆಂಗಳೂರು,ಜ.30: ಹವಾಯಿಯ ಮಾವಿಯಲ್ಲಿರುವ ನ್ಯಾಷನಲ್ ಸೈನ್ಸ್ ಫೌಂಡೇಷನ್‌ನ ಡೇನಿಯಲ್ ಕೆ.ಇನೊಯೆ ಸೌರ ದೂರದರ್ಶಕವು ಸೆರೆ ಹಿಡಿದಿರುವ ಸೂರ್ಯನ ಅತ್ಯಧಿಕ ರೆಸೊಲ್ಯೂಷನ್‌ನ ಚಿತ್ರಗಳನ್ನು ಖಗೋಳಶಾಸ್ತ್ರಜ್ಞರು ಬಿಡುಗಡೆಗೊಳಿಸಿದ್ದಾರೆ.

ಪ್ರತ್ಯೇಕ ಬೃಹತ್ ಕೋಶಗಳಲ್ಲಿ ವಿಭಜಿಸಲ್ಪಟ್ಟಿರುವ ಮರಳುಗಾಡಿನಂತಹ ಮೇಲ್ಮೈ ಮತ್ತು ಇಡೀ ಮೇಲ್ಮೈಯನ್ನು ಆವರಿಸಿರುವ ಕುದಿಯುತ್ತಿರುವ ಅನಿಲ ಅಥವಾ ಪ್ಲಾಸ್ಮಾದ ಪದರ ಸೇರಿದಂತೆ ಸೂರ್ಯನ ಈವರೆಗೂ ನೋಡಿರದ ಅಂಶಗಳನ್ನು ಈ ಚಿತ್ರಗಳು ತೋರಿಸಿವೆ.

ಮೇಲ್ಮೈನಲ್ಲಿರುವ ಟೆಕ್ಸಾಸ್ ಗಾತ್ರದ ಕೋಶಗಳು ಸಂವಹನ ಸೃಷ್ಟಿಗೆ ನೆರವಾಗುತ್ತವೆ ಮತ್ತು ಸೂರ್ಯನ ಒಳಗಿನಿಂದ ಉಷ್ಣತೆಯು ಇಲ್ಲಿಂದ ಹೊರಪದರಗಳಿಗೆ ವರ್ಗಾವಣೆಗೊಳ್ಳುತ್ತದೆ ಹಾಗೂ ಕೋಶಗಳ ಕೇಂದ್ರದಿಂದ ಪ್ಲಾಸ್ಮಾದ ರೂಪದಲ್ಲಿ ಹೊಮ್ಮುತ್ತದೆ. ಈ ಪ್ರಕ್ರಿಯೆಯಲ್ಲಿ ಕೋಶಗಳೂ ಉಷ್ಣತೆಯನ್ನು ಕಳೆದುಕೊಳ್ಳುತ್ತವೆ ಮತ್ತು ತಮಗಿಂತ ಬಿಸಿಯಾದ ವಸ್ತುಗಳಡಿ ಸೇರುತ್ತವೆ. ಬಳಿಕ ಉಷ್ಣತೆಯು ಸೌರವ್ಯವಸ್ಥೆಗೆ ವರ್ಗಾವಣೆಗೊಳ್ಳುತ್ತದೆ ಎನ್ನುವದನ್ನು ಈ ಚಿತ್ರಗಳು ತೋರಿಸಿವೆ.

ಕೊರೊನಾ ಎಂದು ಕರೆಯಲಾಗುವ ಸೂರ್ಯನ ಹೊರ ವಾತಾವರಣವು ಸೂರ್ಯನ ಮೇಲ್ಮೈಗಿಂತ ಅತ್ಯಂತ ಹೆಚ್ಚಿನ ಉಷ್ಣತೆಯನ್ನು ಹೊಂದಿದೆ. ಕೊರೋನಾದ ತಾಪಮಾನ ಸಾಮಾನ್ಯವಾಗಿ 10 ಲಕ್ಷ ಡಿಗ್ರಿ ಸೆಲ್ಸಿಯಸ್ ಇದ್ದರೆ ಮೇಲ್ಮೈ ತಾಪಮಾನ ಕೇವಲ ಸುಮಾರು 5500 ಡಿ.ಸೆ.ನಷ್ಟು ಇದೆ. ಸೂರ್ಯನಿಂದ ಹೊರಹೊಮ್ಮುವ ಅತ್ಯಂತ ಶಕ್ತಿಯುತವಾದ ವಿದ್ಯುದಾವೇಶಗೊಂಡ ಕಣಗಳು ಸೌರ ಮಾರುತವನ್ನು ಸೃಷ್ಟಿಸುತ್ತವೆ ಮತ್ತು ಈ ಸೌರ ಮಾರುತಗಳು ಸೌರ ವ್ಯವಸ್ಥೆಯ ಮೂಲಕ ಹಾದು ವಾತಾವರಣದ ಸಂಪರ್ಕಕ್ಕೆ ಬಂದಾಗ ಬೆಳಕಿನ ಪ್ರಭೆಯನ್ನು ಸೃಷ್ಟಿಸುತ್ತವೆ.

ವಿವರಣಾತ್ಮಕವಾಗಿರುವ ಈ ಚಿತ್ರಗಳು ಅಂತರಿಕ್ಷ ವಾತಾವರಣದಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಸೌರ ಮಾರುತದ ಬಗ್ಗೆ ಹೆಚ್ಚಿನ ಜ್ಞಾನವನ್ನು ಗಳಿಸಲು ಮಹತ್ವದ ಸಾಧನಗಳಾಗಿವೆ ಎಂದು ಪರಿಗಣಿಸಲಾಗಿದೆ. ಸೂರ್ಯನ ಮೇಲಿನ ಉಷ್ಣತೆ ಮತ್ತು ಶಕ್ತಿ ವರ್ಗಾವಣೆ ಪ್ರಕ್ರಿಯೆಗಳು ಸೃಷ್ಟಿಸುವ ಆಯಸ್ಕಾಂತೀಯ ಅಲೆಗಳು ಉಪಗ್ರಹಗಳು,ವಿದ್ಯುತ್ ವ್ಯವಸ್ಥೆಗಳು,ಸಂಪರ್ಕ ಸಾಧನಗಳು ಮತ್ತು ವಿಮಾನಯಾನ ಹಾಗೂ ಬಾಹ್ಯಾಕಾಶ ನಿಲ್ದಾಣದಲ್ಲಿಯ ಗಗನಯಾತ್ರಿಗಳ ಮೇಲೆ ಪರಿಣಾಮವನ್ನುಂಟು ಮಾಡಬಲ್ಲವು.

ಆದರೆ ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಪೂರ್ಣ ತಿಳಿವಳಿಕೆ ಇಲ್ಲ,ಹೀಗಾಗಿ ಅಂತರಿಕ್ಷ ವಾತಾವರಣದ ಕುರಿತು ಭವಿಷ್ಯ ನುಡಿಯುವುದು ಕಷ್ಟ. ಸೂರ್ಯನ ಮೇಲ್ಮೈಯ ಈ ಮೊದಲ ಚಿತ್ರಗಳು ಅಂತರಿಕ್ಷ ವಾತಾವರಣವನ್ನು ಹೆಚ್ಚು ಸಮರ್ಥ ರೀತಿಯಲ್ಲಿ ತಿಳಿದುಕೊಳ್ಳಲು ಮೊದಲ ಹೆಜ್ಜೆಗಳಾಗಿವೆ.

ಡೇನಿಯಲ್ ಕೆ.ಇನೊಯೆ ದೂರದರ್ಶಕವು ನಾಲ್ಕು ಮೀಟರ್ ವ್ಯಾಸದ,ನೆಲದಲ್ಲಿ ಅಳವಡಿಸಲಾಗಿರುವ ವಿಶ್ವದ ಅತ್ಯಂತ ಬೃಹತ್ ಸೌರ ದೂರದರ್ಶಕವಾಗಿದೆ. 13 ಅಡಿ ಉದ್ದದ ಕನ್ನಡಿಗಳನ್ನು ಹೊಂದಿರುವ ಅದು,ಸೂರ್ಯನ ಮೇಲ್ಮೈಯಲ್ಲಿನ 30 ಕಿ.ಮೀ.ಗಳಷ್ಟು ಸಣ್ಣ ರಚನೆಗಳನ್ನೂ ವೀಕ್ಷಿಸಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News