ನಿರ್ಭಯಾ ಪ್ರಕರಣ: ನಾಲ್ವರು ಆರೋಪಿಗಳ ಮರಣದಂಡನೆ ತಡೆ ಕೋರಿದ ಅರ್ಜಿಗೆ ಕೇಂದ್ರ ಸರಕಾರ ವಿರೋಧ

Update: 2020-01-30 16:35 GMT

ಹೊಸದಿಲ್ಲಿ, ಜ. 30: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ಹೊಸ ದಿನಾಂಕ ನೀಡುವ ಬಗ್ಗೆ ದಿಲ್ಲಿ ನ್ಯಾಯಾಲಯ ಶುಕ್ರವಾರ ನಿರ್ಧರಿಸಲಿದೆ. ಫೆಬ್ರವರಿ 1ರ ಡೆತ್ ವಾರಂಟ್ ಅನ್ನು ತಡೆಯುವಂತೆ ಕೋರಿ ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಾದ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

 ಗುರುವಾರ ವಿಚಾರಣೆ ನಡೆದ ಸಂದರ್ಭ ಪೆಬ್ರವರಿ 1ರ ಡೆತ್ ವಾರಂಟ್ ತಡೆಗೆ ತಿಹಾರ್ ಕಾರಾಗೃಹದ ಅಧಿಕಾರಿಗಳು ವಿರೋಧಿ ವ್ಯಕ್ತಪಡಿಸಿದರು. ಸರಕಾರಿ ವಕೀಲ ‘‘ಇದು ನ್ಯಾಯಾಂಗದ ಸಂಪೂರ್ಣ ಅಪಹಾಸ್ಯ’’ ಎಂದು ಹೇಳಿ ಮನವಿ ಸಲ್ಲಿಸಿದ ನಾಲ್ವರು ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡರು. ಆರೋಪಿ 26 ವರ್ಷದ ವಿನಯ್ ಕುಮಾರ್ ಶರ್ಮಾ ಕ್ಷಮಾದಾನ ನೀಡುವಂತೆ ಕೋರಿ ಸಲ್ಲಿಸಿದ ಮನವಿ ಈಗಲೂ ರಾಷ್ಟ್ರಪತಿ ಅವರಲ್ಲಿ ಬಾಕಿ ಇದೆ ಎಂದು ಆರೋಪಿ ಪರ ವಕೀಲ ಎ.ಪಿ. ಸಿಂಗ್ ಸಲ್ಲಿಸಿದ ಮನವಿಯಲ್ಲಿ ಹೇಳಲಾಗಿದೆ.

 ಕೊನೆಯ ವ್ಯಕ್ತಿಯ ಕ್ಷಮಾದಾನ ಅರ್ಜಿ ಸಹಿತ ಕಾನೂನು ಆಯ್ಕೆಗಳು ಮುಗಿಯುವ ವರೆಗೆ ಒಂದೇ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಲ್ಲಿ ಯಾರನ್ನೂ ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಕಾರಾಗೃಹದ ನಿಯಮ ಸ್ಪಷ್ಟವಾಗಿ ಹೇಳುತ್ತದೆ ಎಂದು ಎ.ಪಿ. ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News