ಬ್ಯಾಂಕ್‌ನ ಸಾಲ ವಸೂಲಿಗೆ ತೆರಳಿದ್ದ ವ್ಯಕ್ತಿಗೆ ಗುಂಡೇಟು

Update: 2020-01-30 17:05 GMT

ಬೆಂಗಳೂರು, ಜ.30: ದುಬಾರಿ ಮೌಲ್ಯದ ಬೈಕ್‌ನ ಸಾಲದ ಮಾಸಿಕ ಕಂತನ್ನು ಪಡೆಯಲು ಹೋದಾಗ ನಡೆದ ಜಗಳ ವಿಕೋಪಕ್ಕೆ ತಿರುಗಿ ಬೈಕ್‌ನ ಮಾಲಕನ ಸಂಬಂಧಿ ಹಾರಿಸಿದ ಗುಂಡಿಗೆ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೆಣ್ಣೂರು ಜಂಕ್ಷನ್‌ನಲ್ಲಿ ನಡೆದಿದೆ. 

ಡಿ.ಜೆ.ಹಳ್ಳಿಯ ಸೈಯದ್ ಸಲೀಂ(30) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಗುಂಡು ಹಾರಿಸಿದ ಜಾರ್ಖಂಡ್ ಮೂಲದ ಉದ್ಯಮಿ ಅಮರೇಂದರ್ ಹಾಗೂ ಬೈಕ್ ನ ಮಾಲಕ ಮಯೂರೇಶ್‌ನನ್ನು ಬಂಧಿಸಲಾಗಿದೆ. ಹಾಗೂ ಸಾಲದ ಕಂತಿನ ಪಾವತಿಗೆ ಹೋಗಿದ್ದ ಡಿ.ಜೆ. ಹಳ್ಳಿಯ ಸೈಯದ್ ಅರ್ಷಾದ್ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪತಿಳಿಸಿದ್ದಾರೆ.

ಘಟನೆ ವಿವರ: ಉದ್ಯಮಿಯಾಗಿದ್ದ ಜಾರ್ಖಂಡ್ ಮೂಲದ ಮಯೂರೇಶ್ ಸುಮಾರು 18 ಲಕ್ಷ ರೂ.ಮೌಲ್ಯದ ಹಾರ್ಲೆ ಡೇವಿಡ್‌ಸನ್ ಬೈಕ್‌ನ್ನು ವರ್ಷದ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲ ಪಡೆದು ಖರೀದಿಸಿದ್ದರು. ಸಾಲದ ಕಂತನ್ನು ವಸೂಲಿ ಮಾಡಲು ಬ್ಯಾಂಕ್ ಖಾಸಗಿ ಹಣ ವಸೂಲಿಗಾರ ಸೈಯದ್ ಅರ್ಷಾದ್‌ಗೆ ಜವಾಬ್ದಾರಿ ನೀಡಿತ್ತು.

ಬೈಕ್ ಮಾಲಕ ಮಯೂರೇಶ್ ಜನವರಿ ತಿಂಗಳ ಸಾಲದ ಕಂತನ್ನು ಪಾವತಿಸಲು ವಿಳಂಬ ಮಾಡಿದ್ದಾನೆ. ಹೀಗಾಗಿ ತನ್ನ ಜೊತೆಗಿದ್ದ ಇಬ್ಬರ ಯುವಕರೊಂದಿಗೆ ಬೈಕ್ ಮಾಲಕನ ಮನೆಗೆ ತೆರಳಿದ ಸಾಲ ವಸೂಲಿಗಾರ ಸೈಯದ್ ಅರ್ಷಾದ್ ಕೂಡಲೇ ಸಾಲದ ಕಂತು ಪಾವತಿಸುವಂತೆ ತಿಳಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ.

ಈ ಸಂದರ್ಭದಲ್ಲಿ ಬೈಕ್ ಮಾಲಕ ಮಯೂರೇಶ್ ಸಂಬಂಧಿ ಅಮರೇಂದರ್ ತನ್ನಲಿದ್ದ ಪಿಸ್ತೂಲ್‌ನಿಂದ ಸಾಲ ವಸೂಲಿಗೆ ಹೋಗಿದ್ದ ಸೈಯದ್ ಅರ್ಷಾದ್‌ನ ಜೊತೆಗೆದ್ದ ಯುವಕ ಸೈಯದ್ ಸಲೀಂನ ಎದೆಗೆ ಗುಂಡು ಹಾರಿಸಿದ್ದಾನೆ. ಆತ ಗಂಭೀರ ಗಾಯಗೊಂಡು ಅಲ್ಲಿಯೇ ಕುಸಿದು ಬಿದ್ದದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಸ್ತೂಲ್‌ನ್ನು ಆರೋಪಿ ಅಮರೇಂದರ್ ಪೊಲೀಸ್ ಪರವಾನಗಿ ಪಡೆದು ಖರೀದಿಸಿರುವುದು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News