ಬೆಂಗಳೂರಿನಲ್ಲಿ ನೀರಿನ ಬೇಡಿಕೆ ಹೆಚ್ಚುವ ಸಾಧ್ಯತೆ: ಜಲಮಂಡಳಿ ಮುಖ್ಯ ಇಂಜಿನಿಯರ್

Update: 2020-01-30 18:08 GMT

ಬೆಂಗಳೂರು, ಜ.30: ನಗರದಲ್ಲಿ ನೀರಿನ ಬೇಡಿಕೆ ಹೆಚ್ಚುವ ಸಾಧ್ಯತೆ ಇದ್ದು, ಬೇಸಿಗೆ ಕಾರ್ಯ ಯೋಜನೆ ತಯಾರಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ತಿಂಗಳವರೆಗೆ ನೀರು ಪೂರೈಕೆ ಮಾಡಲು ಬೇಕಾದಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ನೀರಿನ ಸಮಾನ ಹಂಚಿಕೆ ಆಗುವಂತೆ ನೋಡಲು ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿ ನೀಡಲಾಗುತ್ತದೆ. ಫೆಬ್ರವರಿ ಮಧ್ಯದಿಂದಲೇ ನೀರಿನ ಕೊರತೆ ಎದುರಿಸುವ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆಗೆ ಜಲಮಂಡಳಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಬೆಂಗಳೂರು ನಗರಕ್ಕೆ ನಿತ್ಯ ಪೂರೈಕೆಯಾಗುವ ನೀರು- 1.45 ಕೋಟಿ ಲೀಟರ್, ಉತ್ಪಾದನೆಯಾಗುವ ಕೊಳಚೆ ನೀರು- 152.3 ಕೋಟಿ ಲೀಟರ್, ಎಸ್.ಟಿ.ಪಿ ಸಂಸ್ಕರಣಗೊಳ್ಳುತ್ತಿರುವ ನೀರು-112.2 ಕೋಟಿ ಲೀಟರ್, ನಿತ್ಯ ಬಳಕೆಯಾಗುವ ಕೊಳವೆ ನೀರಿನ ಪ್ರಮಾಣ- 40 ಕೋಟಿ ಲೀಟರ್ ಹಾಗೂ ಸಂಸ್ಕರಣೆ ಆಗದೇ ಇರುವ ನೀರಿನ ಪ್ರಮಾಣ- 41.1 ಲೀಟರ್ ಇದೆ ಎಂದು ತಿಳಿಸಿದರು.

ಪ್ರತಿವರ್ಷ ಡ್ಯಾಂ ನೀರು ಸಾಲುವುದಿಲ್ಲ ಎಂಬ ಮಾತು ಇದೆ. ಆದರೆ, ಈ ಬಾರಿ ಡ್ಯಾಂನಲ್ಲಿ ಜೂನ್, ಜುಲೈವರೆಗೂ ಸಮಸ್ಯೆ ಆಗುವುದಿಲ್ಲ. ಸದ್ಯ ನದಿಯಿಂದಲೇ ನೀರು ಹರಿಸಲಾಗುತ್ತಿದ್ದು, ಕಾವೇರಿ ನೀರಾವರಿ ನಿಗಮ 33 ನಗರ, ಹಳ್ಳಿಗಳಿಗೆ ಬೇಕಾದ 2.7 ಟಿಎಂಸಿ ನೀರನ್ನು ಡ್ಯಾಮ್‌ನಲ್ಲಿ ಸಂಗ್ರಹಿಸಿಟ್ಟಿರುತ್ತದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News