ಪೌರತ್ವ ಕಾಯ್ದೆ ಹಾಗೂ ರೌಲತ್ ಕಾಯ್ದೆ ಮಧ್ಯೆ ವ್ಯತ್ಯಾಸವಿಲ್ಲ: ಊರ್ಮಿಳಾ ಮಾತೋಂಡ್ಕರ್

Update: 2020-01-31 20:13 GMT

ಮುಂಬೈ, ಜ.31: ನರೇಂದ್ರ ಮೋದಿ ಸರಕಾರದ ಪೌರತ್ವ ಕಾಯ್ದೆ ಹಾಗೂ ಬ್ರಿಟಿಷರ ಕಾಲದ ರೌಲತ್ ಕಾಯ್ದೆಯ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಇವೆರಡೂ ಕರಾಳ ಕಾನೂನುಗಳೆಂದು ದೇಶದ ಇತಿಹಾಸದಲ್ಲಿ ದಾಖಲಾಗಲಿವೆ ಎಂದು ರಾಜಕಾರಣಿ ಹಾಗೂ ಹಿಂದಿ ಚಿತ್ರನಟಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1919ರ ದ್ವಿತೀಯ ವಿಶ್ವಯುದ್ಧದ ಬಳಿಕ ಭಾರತದಲ್ಲಿ ಅಶಾಂತಿ ಹರಡುತ್ತಿರುವುದನ್ನು ಅರಿತ ಬ್ರಿಟಿಷರು ರೌಲತ್ ಕಾಯ್ದೆ ಎಂದು ಸಾಮಾನ್ಯವಾಗಿ ಕರೆಯಲಾಗುವ ಕಾನೂನನ್ನು ಜಾರಿಗೆ ತಂದರು ಎಂದು ಊರ್ಮಿಳಾ ಹೇಳಿದರು.

ಆದರೆ ವಿಶ್ವಯುದ್ಧದ ಇಸವಿಯನ್ನು ಅವರು ತಪ್ಪಾಗಿ ಉಲ್ಲೇಖಿಸಿದ್ದರು. ದ್ವಿತೀಯ ವಿಶ್ವಯುದ್ಧ 1939ರಿಂದ 1945ರವರೆಗೆ ನಡೆದಿದೆ. ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಜಾರಿಗೆ ತಂದಿದ್ದ ರೌಲತ್ ಕಾಯ್ದೆಯಡಿ, ಬ್ರಿಟಿಷರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಶಂಕಿಸಲಾದ ಯಾವುದೇ ವ್ಯಕ್ತಿಯನ್ನು ಸೂಕ್ತ ವಿಚಾರಣೆ ನಡೆಸದೆ ಬಂಧಿಸಿ ಜೈಲಿಗೆ ಹಾಕಲು ಅವಕಾಶವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News