ಜಾಮಿಯಾದಲ್ಲಿ ಗುಂಡು ಹಾರಿಸಿದವನಿಗೆ ಹಣ ನೀಡಿದ್ದು ಯಾರು: ರಾಹುಲ್ ಗಾಂಧಿ

Update: 2020-01-31 20:29 GMT

ಹೊಸದಿಲ್ಲಿ, ಜ. 31: ದಕ್ಷಿಣ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಹೊರಗೆ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ 17 ವರ್ಷದ ಬಾಲಕನಿಗೆ ಹಣ ನೀಡಿರುವುದು ಯಾರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಬಾಲಕನೋರ್ವ ಕಪ್ಪು ಜಾಕೆಟ್ ಧರಿಸಿ, ಕೈಯಲ್ಲಿ ದೇಶಿ ನಿರ್ಮಿತ ಪಿಸ್ತೂಲ್ ಹಿಡಿದುಕೊಂಡು ಝಳಪಿಸಿದ್ದಾನೆ. ಪೊಲೀಸರ ಸಮ್ಮುಖದಲ್ಲೇ ಆತ ಹಾರಿಸಿದ ಗುಂಡಿಗೆ ಓರ್ವ ಗಾಯಗೊಂಡಿದ್ದರು.

ಸಂಸತ್ತಿನ ಬಜೆಟ್ ಅಧಿವೇಶನದ ಮುನ್ನಾ ದಿನವಾದ ಶುಕ್ರವಾರ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಜಾಮಿಯಾದಲ್ಲಿ ಗುಂಡು ಹಾರಿಸಿದ ಬಾಲಕನಿಗೆ ಹಣ ಪಾವತಿಸಿದವರು ಯಾರು ? ಎಂದು ಪ್ರಶ್ನಿಸಿದರು.

ಬಾಲಕ ಹಾರಿಸಿದ ಗುಂಡಿಗೆ ಸಮೂಹ ಮಾಧ್ಯಮ ಸಂಶೋಧನಾ ಕೇಂದ್ರದ ಅಂತಿಮ ವರ್ಷದ ಸ್ನಾತಕೋತ್ತರ ಪದವಿಯ 22 ವರ್ಷದ ವಿದ್ಯಾರ್ಥಿ ಗಾಯಗೊಂಡಿದ್ದರು. ‘‘ನಾನು ನಿಮಗೆ ಹಿಂಸೆಯ ಬಗ್ಗೆ ಬೋಧಿಸಲಾರೆ. ಯಾಕೆಂದರೆ, ನನಗೆ ಅದರ ಬಗ್ಗೆ ನಂಬಿಕೆ ಇಲ್ಲ. ಜೀವ ಹೋದರೂ ಯಾರ ಮುಂದೆಯೂ ತಲೆ ತಗ್ಗಿಸದಿರುವುದರ ಬಗ್ಗೆ ನಾನು ಬೋಧಿಸಬಲ್ಲೆ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News