ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಕೇರಳ ಕಾಂಗ್ರೆಸ್ ನಾಯಕ ಬಂಧನ

Update: 2020-02-01 03:58 GMT

ಕಣ್ಣೂರು: ಒಂಬತ್ತು ವರ್ಷದ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಬಂಧಿಸಲಾಗಿದೆ.

ಜಿಲ್ಲಾ ಮಕ್ಕಳ ಸಹಾಯವಾಣಿ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಪಿ.ಪಿ.ಬಾಬು (59) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆ ಬಾಲಕಿ ಕೌನ್ಸಿಲಿಂಗ್ ವೇಳೆ ಕಾಂಗ್ರೆಸ್ ನಾಯಕನ ದೌರ್ಜನ್ಯವನ್ನು ವಿವರಿಸಿದ್ದನ್ನು ಸಹಾಯವಾಣಿ ಅಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದರು.

ಬಾಬು ಕಾಂಗ್ರೆಸ್ ಪಕ್ಷದ ಸೇವಾದಳ ರಾಜ್ಯಮಟ್ಟದ ಸಮನ್ವಯ ಸಮಿತಿ ಸದಸ್ಯನಾಗಿದ್ದ. ಈತನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

"ಚೈಲ್ಡ್‌ಲೈನ್ ಅಧಿಕಾರಿಗಳು ಈ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಬಾಲಕಿ ಈ ದೌರ್ಜನ್ಯ ಎದುರಿಸುತ್ತಿದ್ದಳು. ಆಕೆ ತನ್ನ ದುರಂತ ಕಥೆಯನ್ನು ಚೈಲ್ಡ್‌ಲೈನ್ ಅಧಿಕಾರಿಗಳಿಗೆ ವಿವರಿಸಿದ್ದಾಳೆ" ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News