ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ.ಗೋಪಾಲಗೌಡ

Update: 2020-02-01 14:50 GMT

ಬೆಂಗಳೂರು, ಫೆ.1: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್ ಪಿಆರ್ ಹಾಗೂ ಎನ್‌ಆರ್‌ಸಿ ವಿರುದ್ಧದ ಹೋರಾಟವು ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಗೋಪಾಲಗೌಡ ಅಭಿಪ್ರಾಯಿಸಿದ್ದಾರೆ.

ಶನಿವಾರ ಬೆಂಗಳೂರು ಅಡ್ವಕೇಟ್ ಫೋರಂ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿಯಿಂದ ಜನತೆಯ ಮೇಲಾಗುವ ದುಷ್ಪರಿಣಾಮಗಳ ಕುರಿತು ಅಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ ಮೂಲಭೂತ ಆಶಯಗಳನ್ನೇ ನಾಶ ಮಾಡುತ್ತಿದೆ. ಆದರೂ ಸುಪ್ರೀಂ ಕೋರ್ಟ್ ಸಂವಿಧಾನವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದು ನಮಗೆಲ್ಲಾ ಆತಂಕ ಮೂಡಿಸಿದೆ. ಹೀಗಾಗಿ ಭಾರತದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಜಾತ್ಯತೀತ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ನಡೆಯುತ್ತಿರುವ 2ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವೆಲ್ಲರೂ ಭಾಗವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ಆದರೆ, ಸಿಎಎ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ಹಾಗೂ ಭಾರತದ ಇತರೆ ನೆರೆ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಟಿಬೆಟ್, ಮಯನ್ಮಾರ್‌ನ್ನು ಈ ಕಾಯ್ದೆ ವ್ಯಾಪ್ತಿಗೆ ಸೇರಿಸದಿರುವುದು ಭಾರತದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವ್ಯಾಖ್ಯಾನವನ್ನು ಕಾಯ್ದೆಯಲ್ಲಿ ಅಳವಡಿಸಿಲ್ಲ. ಇದು ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದರ ಬಗ್ಗೆಯೂ ಕಾಯ್ದೆಯಲ್ಲಿ ವಿವರಣೆಗಳಿಲ್ಲ. ಬಿಜೆಪಿ ನಾಯಕರ ಈ ಧೋರಣೆ ಸಂಸತ್‌ಗೆ, ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ. ಹೀಗಾಗಿ ಸಂವಿಧಾನದ ಉಳಿವಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಸಂವಿಧಾನ ತಜ್ಞ ರವಿವರ್ಮ ಕುಮಾರ್ ಮಾತನಾಡಿ, ಜಗತ್ತಿನ ಇತರೆ ದೇಶಗಳ ಸಂವಿಧಾನದ ಭವಿಷ್ಯ ಸರಾಸರಿ 17ವರ್ಷ ಆಗಿದೆ. ಆದರೆ, ನಮ್ಮ ಭಾರತದ ಸಂವಿಧಾನ 7ದಶಕ ಕಳೆದರೂ ದೇಶಕ್ಕೆ ಆಧಾರಸ್ತಂಬವಾಗಿದೆ. ಧರ್ಮನಿರಾಪೇಕ್ಷತೆ ನಮ್ಮ ಸಂವಿಧಾನದ ಮೂಲತತ್ವವಾಗಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

ಭಾರತದ ಲಕ್ಷಾಂತರ ಮಂದಿ ಅರಬ್ ರಾಷ್ಟ್ರಗಳು ಸೇರಿದಂತೆ ಇತರೆ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಭಾರತದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ಇದೆ. ಭಾರತದಲ್ಲಿ ಬಿಜೆಪಿ ಸರಕಾರ ರೂಪಿಸುತ್ತಿರುವ ಕಾಯ್ದೆಗಳ ರೂಪದಲ್ಲಿಯೇ ಆ ದೇಶಗಳು ಕಾಯ್ದೆ ರೂಪಿಸಿದರೆ ಭಾರತದ ಉದ್ಯೋಗಿಗಳು, ದೇಶದ ಆರ್ಥಿಕತೆಯ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಚಿಂತಿಸಲಿ ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಎ.ಎಸ್.ಪೊನ್ನಣ್ಣ ಮಾತನಾಡಿ, ಸಿಎಎ ಕಾಯ್ದೆ ಜಾರಿಯಾದಾಗಿನಿಂದ ಅಸ್ಸಾಮ್, ಬಿಹಾರ, ಪಶ್ಚಿಮಬಂಗಾಳದಿಂದ ಇಲ್ಲಿಗೆ ಬಂದು ಕೂಲಿ ಮಾಡುತ್ತಿರುವ ಅಮಾಯಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಕೊಡಗಿನ ಕಾಫಿ ಎಸ್ಟೇಟ್‌ಗಳಲ್ಲಿ ದುಡಿಯುತ್ತಿರುವ ಉತ್ತರ ಭಾರತದ ಮುಸ್ಲಿಮ್ ಕೂಲಿ ಕಾರ್ಮಿಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ದೇಶದ ಕೂಲಿಕಾರ್ಮಿಕರ ಮೇಲೆ ಇಂತಹ ದೌರ್ಜನ್ಯಗಳು ಸಾಮಾನ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿಚಾರ ಸಂಕಿರಣದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಹಿರಿಯ ವಕೀಲರಾದ ಎಸ್.ಬಾಲನ್, ಡಾ.ಎಚ್.ಜಿ.ಜಯಲಕ್ಷ್ಮಿ, ಬಿ.ಟಿ.ವೆಂಕಟೇಶ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News