ಇಸ್ರೋದ ಯುವ ವಿಜ್ಞಾನಿ ಕಾರ್ಯಕ್ರಮ(ಯುವಿಕಾ): ಆನ್‌ಲೈನ್ ನೋಂದಣಿ

Update: 2020-02-01 18:35 GMT

ಬೆಂಗಳೂರು, ಫೆ.1: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶಾಲಾ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಯುವ ವಿಜ್ಞಾನಿ ಕಾರ್ಯಕ್ರಮ/ಯುವ ವಿಜ್ಞಾನಿ ಕಾರ್ಯಕ್ರಮ 2019ರಿಂದ ಆರಂಭಿಸಿದೆ. ಯುವಿಕಾ-2020ಕ್ಕೆ ಆನ್‌ಲೈನ್ ನೋಂದಣಿ ಸದ್ಯದಲ್ಲೆ ಆರಂಭವಾಗಲಿದೆ.

ಈ ಕಾರ್ಯಕ್ರಮ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಯುವ ಮಕ್ಕಳಲ್ಲಿ ಆಸಕ್ತಿಯನ್ನು ಮೂಡಿಸುವ ದೃಷ್ಟಿಯಿಂದ ಹಾಗೂ ಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಬಗ್ಗೆ ಮೂಲ ಜ್ಞಾನ ತಿಳಿಸಿಕೊಡುವ ಗುರಿ ಹೊಂದಲಾಗಿದೆ.

ಇಸ್ರೋ ‘ಕ್ಯಾಚ್ ದೆಮ್ ಯಂಗ್’ ಎನ್ನುವ ಘೋಷಣೆಯೊಂದಿಗೆ ಈ ಕಾರ್ಯಕ್ರಮವನ್ನು ಆರಂಭಿಸಿದೆ. ಬೇಸಿಗೆ ರಜೆಯಲ್ಲಿ(ಮೇ 2020) ಎರಡು ವಾರಗಳ ಅವಧಿಯ ವಸತಿ ಸಹಿತ ತರಬೇತಿ ಕಾರ್ಯಕ್ರಮ ಇದರಲ್ಲಿ ಒಳಗೊಂಡಿದೆ. ಈ ಕಾರ್ಯಕ್ರಮಕ್ಕಾಗಿ ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಿಂದ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಯುವಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಮಕ್ಕಳನ್ನು ಆನ್‌ಲೈನ್ ನೋಂದಣಿ ಮೂಲಕ ಅವರ 8ನೇ ತರಗತಿಯ ಅಂಕಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಇಸ್ರೋ ವೆಬ್‌ಸೈಟ್ www.isro.gov.in ನಲ್ಲಿ 2020ರ ಫೆಬ್ರವರಿ 3ರಿಂದ 24ರ ವರೆಗೆ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ www.isro.gov.in ಲಾಗ್‌ಆನ್ ಆಗಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News