ಬಿಜೆಪಿ ನಾಯಕ ಸ್ವಪನ್‌ ದಾಸ್ ಗುಪ್ತಾ ಪುತ್ರನಿಂದ ಲೈಂಗಿಕ ದೌರ್ಜನ್ಯ: ಆರೋಪ

Update: 2020-02-02 04:21 GMT

ಕೊಲ್ಕತ್ತಾ: ಬಿಜೆಪಿ ಸಂಸದ ಸ್ವಪನ್‌ ದಾಸ್ ಗುಪ್ತಾ ಅವರ ಪುತ್ರ ಸೌಮ್ಯ ಸೃಜನ್ ದಾಸ್‌ಗುಪ್ತಾ ಕನಿಷ್ಠ ಮೂವರು ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ.

ಅನನ್ಯಾ ಎಂಬ ಮಹಿಳೆ ದೆಹಲಿಯ ಸಂತ ಜೋಸೆಫ್ಸ್ ಕಾಲೇಜಿನ ಸ್ಟೆಫಾನಿಯನ್ಸ್ ಮತ್ತು ಲಾಲ್ ಸಿತಾರ ಎಂಬ ಎರಡು ಹಳೆ ವಿದ್ಯಾರ್ಥಿ ಗುಂಪುಗಳಲ್ಲಿ ಈ ಬಗ್ಗೆ ಆರೋಪ ಮಾಡಿದ್ದಾರೆ. ದೆಹಲಿಯ ಸಂತ ಜೋಸೆಫ್ಸ್ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆಪಾದಿಸಿದ್ದಾರೆ.

ಸೌಮ್ಯ ದಾಸ್‌ಗುಪ್ತಾ 2009ರಿಂದ 2011ರ ಅವಧಿಯಲ್ಲಿ ಸಂತ ಜೋಸೆಫ್ಸ್ ಕಾಲೇಜಿನಲ್ಲಿ ಇತಿಹಾಸ ಅಧ್ಯಯನ ನಡೆಸಿದ್ದರು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.

"ಬಿಜೆಪಿ ಮುಖಂಡ ಸ್ವಪನ್‌ ದಾಸ್‌ಗುಪ್ತಾ ಅವರ ಮಗ ಸೌಮ್ಯ ದಾಸ್‌ಗುಪ್ತಾ ಸರಣಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ. ನಾನು ಕಾಲೇಜಿನ ಮೊದಲನೇ ವರ್ಷದಲ್ಲಿದ್ದಾಗ ಮೊದಲ ಬಾರಿ ದೌರ್ಜನ್ಯ ಎಸಗಿದ್ದಾನೆ. ಆ ಬಳಿಕ ಆತನಿಂದ ಲೈಂಗಿಕ ಕಿರುಕುಳಕ್ಕೀಡಾದ ಕನಿಷ್ಠ ಐದು ಮಂದಿ ಮಹಿಳೆಯರಲ್ಲಿ ತಾನು ಒಬ್ಬಳು ಎನ್ನುವುದು ಇನ್‌ಸ್ಟಾಗ್ರಾಂನಿಂದ ತಿಳಿಯಿತು. ಆತ ಇದನ್ನು ನಿರಾಕರಿಸಬಹುದು. ಆದರೆ ಬಹಳಷ್ಟು ಮಹಿಳೆಯರು ಆತನಿಂದ ಆಘಾತಕ್ಕೆ ಒಳಗಾಗಿದ್ದಾರೆ. ಇನ್ನು ಮುಂದಾದರೂ ಇದು ನಡೆಯದಿರಲಿ. ಫೇಸ್‌ಬುಕ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾನೆ. ಮತ್ತೊಬ್ಬ ಸಂತ್ರಸ್ತೆಯನ್ನೂ ಹೀಗೇ ಮಾಡಿದ್ದಾನೆ. ಇತ್ತೀಚಿನ ಕಿರುಕುಳ 2017ರಲ್ಲಿ ನೀಡಿದ್ದಾನೆ. ಆದ್ದರಿಂದ ಕಾಲೇಜಿನಲ್ಲಿ ಇದ್ದಾಗ ಮಾತ್ರ ಹೀಗೆ ಮಾಡಿದ್ದಲ್ಲ; ಸುಪ್ರೀಂಕೋಟ್ ವಕೀಲನಾಗಿಯೂ ಇದನ್ನು ಮುಂದುವರಿಸಿದ್ದಾನೆ. ಯಾರಾದರೂ ಆತನನ್ನು ಹೊಣೆಗಾರನನ್ನಾಗಿ ಮಾಡಬೇಕು ಹಾಗೂ ಅಧಿಕಾರದ ಕಾರಣದಿಂದ ತಪ್ಪಿಸಿಕೊಳ್ಳಲು ಬಿಡಬಾರದು" ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಲಾಲ್ ಸಿತಾರದಿಂದ ಈ ಪೋಸ್ಟನ್ನು ತಕ್ಷಣ ಡಿಲೀಟ್ ಮಾಡಲಾಗಿದೆ. ಏಕೆ ಡಿಲೀಟ್ ಮಾಡಲಾಗಿದೆ ಎಂಬ ಪ್ರಶ್ನೆಗೆ ಅಡ್ಮಿನ್‌ನಿಂದ ಉತ್ತರ ಸಿಕ್ಕಿಲ್ಲ.

ಈ ಪೋಸ್ಟ್‌ನಿಂದ ಪ್ರೇರಿತರಾಗಿ ಮತ್ತೊಬ್ಬ ಮಹಿಳೆ ಕೂಡಾ ದಾಸ್‌ಗುಪ್ತಾ ವಿರುದ್ಧ ಆಪಾದಿಸಿದ್ದಾರೆ. ಸ್ಟೆಫಾನಿಯನ್ಸ್‌ನಲ್ಲಿ ಅನನ್ಯಾ ಪೋಸ್ಟ್ ಶೇರ್ ಮಾಡಿದ ಮಹಿಳೆ, "ಐವರು ಸಂತ್ರಸ್ತೆಯರಲ್ಲಿ ನಾನು ಕೂಡಾ ಒಬ್ಬಳು ಎಂದು ಖಚಿತಪಡಿಸುತ್ತೇನೆ. ಸೌಮ್ಯ ದಾಸ್‌ಗುಪ್ತಾ 2017ರಲ್ಲಿ ಲಂಡನ್‌ನಲ್ಲಿ ಲೈಂಗಿಕ ಕಿರುಕುಳ ನೀಡಿ ಲೈಂಗಿಕ ಸಂಪರ್ಕಕ್ಕೆ ಯತ್ನಿಸಿದ್ದ" ಎಂದು ವಿವರಿಸಿದ್ದಾರೆ.

ಅನನ್ಯಾ ಅವರ ಪೋಸ್ಟನ್ನು ಮತ್ತೊಬ್ಬ ಮಹಿಳೆ ಕೂಡಾ ಶೇರ್ ಮಾಡಿದ್ದು, "ನಾನು ಸಂತ ಸ್ಟೀಫನ್ಸ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ಸ್ನೇಹಿತೆಯ ಮನೆಯಲ್ಲಿ ಮಲಗಿದ್ದಾಗ ದಾಸ್‌ಗುಪ್ತ ಲೈಂಗಿಕ ಕಿರುಕುಳ ನೀಡಿದ್ದ. ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಐವರು ಸಂತ್ರಸ್ತೆಯರಲ್ಲಿ ನಾನೂ ಒಬ್ಬಳು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News