ಫೆ.6ರಂದು ಸಚಿವ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-02-02 11:54 GMT

ಬೆಂಗಳೂರು, ಫೆ.2: ರಾಜ್ಯ ಸರಕಾರ ಸಚಿವ ಸಂಪುಟ ವಿಸ್ತರಣೆ ಫೆ.6ರ ಬೆಳಗ್ಗೆ 10:30ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿದ್ದು, ಉಪಚುನಾವಣೆಯಲ್ಲಿ ಆಯ್ಕೆಯಾದ 10 ಶಾಸಕರು ಹಾಗೂ 3 ಮಂದಿ ಮೂಲ ಬಿಜೆಪಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್‌ನ 17ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಸಾಧ್ಯವಾಗಿದೆ. ಹೀಗಾಗಿ ಕೊಟ್ಟ ಭರವಸೆಯಂತೆ ಉಪಚುನಾವಣೆ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದರು.

ಸುಪ್ರೀಂ ಕೋರ್ಟ್ ಆದೇಶದಂತೆ ಸೋತವರಿಗೆ ಸಚಿವ ಸ್ಥಾನ ನೀಡುವಂತಿಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಶಾಸಕರ ಪೈಕಿ 10 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಮಾಜಿ ಸಚಿವ ಆರ್.ಶಂಕರ್‌ಗೆ ಮುಂದಿನ ದಿನಗಳಲ್ಲಿ ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಬಳಿಕ ಮಂತ್ರಿ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಬೆಂಗಳೂರು, ಬೆಳಗಾವಿ ಭಾಗಕ್ಕೆ ಹೆಚ್ಚು ಸಚಿವ ಸ್ಥಾನ ಸಿಕ್ಕಿರುವುದರ ಕುರಿತ ಪ್ರಶ್ನೆಗೆ, ಅದು ಅನಿವಾರ್ಯವಾಗಿದೆ ಎಂದು ಯಡಿಯೂರಪ್ಪ ಇದೇ ವೇಳೆ ಸಮಜಾಯಿಷಿ ನೀಡಿದರು.

‘ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಶಾಸಕರ ಪೈಕಿ 10ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ ಆ ಹನ್ನೊಂದು ಮಂದಿ ಪೈಕಿ ಯಾರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂಬ ಪ್ರಶ್ನೆಗೆ, ಕಾದು ನೋಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪುವ ಸಂಭವ ಹೆಚ್ಚಿದೆ ಎನ್ನಲಾಗಿದೆ’

ಸಚಿವಾಕಾಂಕ್ಷಿಗಳು

ಬಿ.ಸಿ.ಪಾಟೀಲ್-ಹಿರೇಕೆರೂರು, ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ, ಭೈರತಿ ಬಸವರಾಜು- ಕೆ.ಆರ್.ಪುರ, ಕೆ.ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್, ರಮೇಶ್ ಜಾರಕಿಹೊಳಿ-ಗೋಕಾಕ್, ಶ್ರೀಮಂತ್‌ ಪಾಟೀಲ್-ಕಾಗವಾಡ, ಎಸ್.ಟಿ. ಸೋಮಶೇಖರ್-ಯಶವಂತಪುರ, ಶಿವರಾಮ್ ಹೆಬ್ಬಾರ್-ಯಲ್ಲಾಪುರ, ನಾರಾಯಣಗೌಡ-ಕೆ.ಆರ್.ಪೇಟೆ, ಆನಂದ್ ಸಿಂಗ್-ವಿಜಯನಗರ. ಮೂಲ ಬಿಜೆಪಿಯಿಂದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ ಸೇರಿದಂತೆ ಮೂವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News