'ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದರೂ...': ಜನ್ಮದಿನದಂದೇ ಭಾವುಕರಾಗಿ ಕವಿ ನಿಸಾರ್ ಅಹಮದ್ ಹೇಳಿದ್ದೇನು ?

Update: 2020-02-02 11:49 GMT

ಬೆಂಗಳೂರು, ಫೆ.2: ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದರೂ ಸಹ ಇನ್ನು ಕೂಡ ನನ್ನ ಅಭಿಮಾನಿ ಬಳಗ ಜನ್ಮದಿನ ಆಚರಿಸಲು ಈ ಕಾರ್ಯಕ್ರಮ ಅಯೋಜಿಸಿದ್ದಾರೆ. ಅವರ ಈ ಪ್ರೀತಿಗೆ ನಾನು ಧನ್ಯ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್ ನಿಸಾರ್ ಅಹಮದ್ ಭಾವುಕರಾದರು.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ನಾಡೋಜ ಕೆ.ಎಸ್.ನಿಸಾರ್ ಅಹಮದ್ ಅಭಿಮಾನಿಗಳ ಸಮಿತಿ ವತಿಯಿಂದ ಆಯೋಜಿಸಿದ್ದ ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಅವರ 84ನೆ ಹುಟ್ಟು ಹಬ್ಬದ ಸಂಭ್ರಮ ಮತ್ತು ಅವರ ಐದು ಕೃತಿಗಳ ಅನುವಾದದ ವಿವೇಚನೆ ನಿತ್ಯೋತ್ಸವ-84 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1967ರಲ್ಲಿ ನಾನು ಶಿವಮೊಗ್ಗದಲ್ಲಿದ್ದಾಗ ನಿತ್ಯೋತ್ಸವ ಪದ್ಯ ಬರೆದಿದ್ದೆ. ಮೈಸೂರು ಅನಂತಮೂರ್ತಿ ಅವರು ನನಗೆ ಮಾರ್ಗದರ್ಶನ ಮಾಡಿದ್ದರು. ಅದು 1970ರಲ್ಲಿ ಸಿಡಿ ಬಿಡುಗಡೆಯಾಯಿತು. ಅಂದಿನಿಂದ ಇಂದಿನವರೆಗೆ ನನ್ನನ್ನು ಹರಸಿ, ಹಾರೈಸಿದ್ದಿರಿ. ಇದನ್ನು ನಾನು ಕನ್ನಡಕ್ಕೆ ಸಿಕ್ಕ ಕೀರ್ತಿ ಎಂದೆ ಭಾವಿಸಿದ್ದೇನೆ ಎಂದು ಹೇಳಿದರು.

ಡಾ.ಎಂ.ಎಸ್. ರಘುನಾಥ ಮಾತನಾಡಿ, ನಿಸಾರ್ ಅಹಮದ್ ಅವರು ಕನ್ನಡ ಕಾವ್ಯ ರಚನೆಯಲ್ಲಿ ತೊಡಗಿದವರು. ಕನ್ನಡ ಕಾವ್ಯ ಇಂದು ಹರಳು ದಾರಿಯಲ್ಲಿದೆ. ಕಾವ್ಯ ರಚನೆಕಾರರು ಇದ್ದಾರೆ. ಆದರೆ, ನಿಸಾರ್ ಅವರ ಕಾವ್ಯಗಳು ಶಾಶ್ವತ. ಭಾಷೆ ಅಭಿವ್ಯಕ್ತಿ ಕನ್ನಡವಾಗಿದೆ. ಸಮಾಜಕ್ಕೆ ಬೇಕಾದ ಕಾವ್ಯವನ್ನು ರಚಿಸಬೇಕು ಎಂಬುದು ದೊಡ್ಡ ಗುಣ, ಸಾಮಾಜಿಕ ಅನಿಷ್ಟಗಳ ವಿರುದ್ಧ ನಿಸಾರ್ ಅಹಮದ್ ಮಾತಾಡಿದ್ದಾರೆ ಎಂದು ಹೇಳಿದರು.

ನಿಸಾರ್ ಅಹಮದ್ ಅನನ್ಯತೆಯ ಧ್ವನಿಯಾಗಿದ್ದಾರೆ. ಶ್ರೀಸಾಮಾನ್ಯನಿಗೆ ಅರ್ಥವಾಗುವಂತ್ತಿದೆ. ಕಾವ್ಯದಲ್ಲಿ ಪರಂಪರೆ, ರೂಪಕವಾಗಿದ್ದು, ವಿಭಿನ್ನವಾಗಿ ರಚನೆ ಮಾಡಿದ್ದಾರೆ. ಜನಪ್ರಿಯತೆಯಲ್ಲೆ ಜನಪ್ರಿಯವಾದವರು ನಿಸಾರ್ ಅಹಮದ್ ಅವರು ಎಂದರು. ಕಾರ್ಯಕ್ರಮದಲ್ಲಿ ಶುಭಮಂಗಳ ಮಂಜುನಾಥ, ಶ್ರೀನಿವಾಸ ಉಡುಪ, ಸಿ.ಎನ್.ರಾಮಚಂದ್ರ, ಪ್ರೊ.ಆರತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News