'ದೇಶ್ ಕೇ ಗದ್ದಾರೋಂಕೋ ಗೋಲಿ ಮಾರೋ' ಘೋಷಣೆಗೆ ದಿಲ್ಲಿ ಪೊಲೀಸರಿಂದ ಅನುಮತಿ!

Update: 2020-02-02 11:49 GMT

ಹೊಸದಿಲ್ಲಿ: 'ದೇಶ್ ಕೇ ಗದ್ದಾರೋಂಕೋ ಗೋಲಿ ಮಾರೋ ಸಾಲೊನ್ ಕೊ' ಘೋಷಣೆ ಕೂಗಿ ರ್ಯಾಲಿ ನಡೆಸಲು ದಿಲ್ಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಬಹಿರಂಗಪಡಿಸಿದ್ದಾರೆ.

ಈ ಸಂಬಂಧ ದಿಲ್ಲಿ ಪೊಲೀಸ್ ಅಧಿಕಾರಿಗಳ ಮುದ್ರೆ ಇರುವ ಪತ್ರದ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಈ ಘೋಷಣೆಗಾಗಿಯೇ ಪೊಲೀಸರಲ್ಲಿ ತಾನು ಮನವಿ ಮಾಡಿದ್ದೆ ಎಂದು ವಿವರಿಸಿದ್ದಾರೆ. ಇಂತಹ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆಯೇ ಎಂದು ನೋಡಲು ತಾನು ಹೀಗೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಜೇವಾರ್ ನಿವಾಸಿ ರಾಮಭಕ್ತ್ ಗೋಪಾಲ್ ಎಂಬಾತ ಶಾಬದ್ ಎಂಬ ವಿದ್ಯಾರ್ಥಿಗೆ ಗುಂಡು ಹೊಡೆದ ಬೆನ್ನಲ್ಲೇ ಈ ವಿಚಿತ್ರ ನಿರ್ಧಾರ ಬೆಳಕಿಗೆ ಬಂದಿದೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ಯಾಂಪಸ್‍ ನಲ್ಲೇ ಇತ್ತೀಚೆಗೆ ಗುಂಡು ಹಾರಿಸಿ, ಲಾಠಿ ಪ್ರಹಾರ ನಡೆಸಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.

ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಖುದ್ದು ಹಾಜರಾಗಿ ತಾನು ಈ ಪ್ರತಿಭಟನೆಗೆ ಅನುಮತಿ ಪಡೆಯುವ ವೇಳೆ ದೆಹಲಿ ಪೊಲೀಸ್ ಇಲಾಖೆಯ ಎಸಿಪಿ ಎಚ್‍ಎಎಕ್ಸ್ ಘಟಕದಿಂದ ತಮಗೆ ಕರೆ ಬಂದಿದೆ ಎಂದೂ ಗೋಖಲೆ ಹೇಳಿಕೊಂಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಫೆಬ್ರವರಿ 8ರ ಬಳಿಕ ರ್ಯಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.

ಇಂತಹ ಘೋಷಣೆ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದ್ದರೆ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಕಪಿಲ್ ಮಿಶ್ರಾ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಗೋಖಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News