ಸಿಎಎ ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ದೇಶದ ಸಮಸ್ಯೆ: ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ

Update: 2020-02-02 17:49 GMT

ಬೆಂಗಳೂರು, ಫೆ. 2: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ದೇಶದ ಎಲ್ಲ ಬಡವರೂ ಸೇರಿದಂತೆ ದೇಶದ ಸಮಸ್ಯೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಂದ್ರಪೂಜಾರಿ ಹೇಳಿದ್ದಾರೆ.

ರವಿವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತು ಜನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೂಗಳ ಮೇಲೆ ದೌರ್ಜನ್ಯ ಕೇವಲ ಮುಸ್ಲಿಮ್ ರಾಷ್ಟ್ರಗಳಲ್ಲಿಯೇ ಆಗುತ್ತಿದೆ ಎಂದು ಬಿಂಬಿಸಲು ಕೇಂದ್ರ ಸರಕಾರ ಹೊರಟಿದೆ. ಇದು ಬಿಜೆಪಿ ಅಜೆಂಡಾವಾಗಿದ್ದು, ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ಎಲ್ಲಿಯೂ ಅವಕಾಶವಿಲ್ಲ ಎನ್ನುತ್ತಿದೆ. ಆದರೆ, ಭಾರತದ ಹಿಂದೂಗಳು ಅಮೆರಿಕಾ, ಆಸ್ಟೇಲಿಯಾ, ಸೌದಿ ಅರೇಬಿಯಾಗಳಿಗೆ ಯಾಕೆ ವಲಸೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಎನ್‌ಪಿಆರ್ ಜಾರಿಗೆ ಮುಂದಾಗಿದೆ. ಇದರ ಮೂಲಕವೇ ನಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆ ಕೇಳುತ್ತಾರೆ. ನಮ್ಮ ತಂದೆ-ತಾಯಿ ಹುಟ್ಟಿದ ದಿನ, ಸ್ಥಳ ಎಲ್ಲವೂ ನೀಡಬೇಕಾಗುತ್ತದೆ. ಇದಾದ ಬಳಿಕ ಅನುಮಾನಿತ ನಾಗರಿಕರು ಎಂದು ಗುರುತಿಸಿ, ಅವರಿಗೆ ನೋಟಿಸ್ ನೀಡಲಾಗುತ್ತದೆ. ಇದು ಕೇವಲ ಮುಸ್ಲಿಮರಿಗೆ ಅನ್ವಯವಾಗಲ್ಲ, ದೇಶದ ಎಲ್ಲ ಬಡವರಿಗೂ ಅನ್ವಯವಾಗಲಿದೆ ಎಂದರು.

ಅಣ್ಣ-ತಮ್ಮ ಇದ್ದಂತೆ: ಕೇಂದ್ರ ಸರಕಾರ ಹಾಗೂ ಸುಪ್ರೀಂಕೋರ್ಟ್ ಅಣ್ಣ-ತಮ್ಮ ಇದ್ದಂತೆ ಭಾಸವಾಗುತ್ತಿದೆ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ನೀಡಿದ್ದು ತೆಗೆದಾಗ, ಅಯೋಧ್ಯೆ ತೀರ್ಪು ನೀಡಿದ್ದು ನೋಡಿದರೆ ಸರಕಾರ ಹಾಗೂ ಕೋರ್ಟ್ ನಡುವೆ ಸಂಬಂಧ ತಿಳಿಯುತ್ತದೆ. ಜೆಎನ್‌ಯುನೊಳಗೆ ಮುಸುಕುದಾರಿಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಸುಪ್ರೀಂ ಜೀವಂತವಿದ್ದರೂ, ಈ ಕುರಿತು ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದು ದುರಂತ ಎಂದು ಹೇಳಿದರು.

ಚಳವಳಿಯಿಂದ ಪ್ರಜಾಪ್ರಭುತ್ವ ಸೃಷ್ಟಿ: ದೇಶದಲ್ಲಿ ಬಿಜೆಪಿ ಇನ್ನೂ 5 ವರ್ಷಗಳ ಕಾಲ ಅಧಿಕಾರ ನಡೆಸಿದರೆ, ಜನರು ಮತ್ತಷ್ಟು ಸಂಘಟಿತರಾಗುತ್ತಾರೆ. ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಈಗಾಗಲೇ ದೇಶದಾದ್ಯಂತ ಜಾತಿ, ಧರ್ಮಗಳು ಧಿಕ್ಕರಿಸಿ ಚಳವಳಿಗೆ ಧುಮುಕಿದ್ದಾರೆ. ಹೀಗೆ ಚಳವಳಿ ಮುಂದುವರಿದು ಬಲಿಷ್ಠವಾದ ಪ್ರಜಾಪ್ರಭುತ್ವ ರೂಪಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.

70ವರ್ಷಗಳಿಂದಲೂ ದೇಶದಲ್ಲಿ ನಾವು ನೈಜ ಪ್ರಜಾಪ್ರಭುತ್ವವನ್ನು ಕಂಡಿಲ್ಲ. ಕಾಂಗ್ರೆಸ್‌ನವರು ಜಾತಿಗಳ ನಡುವೆ, ಬಿಜೆಪಿ ಧರ್ಮಗಳ ನಡುವೆ ಸಂಘರ್ಷ ತಂದಿಟ್ಟುಕೊಂಡೇ ಕಾಲ ಕಳೆದಿದ್ದಾರೆ. ಇದರ ನಡುವೆ ಆಳುವ ವರ್ಗ ಮಾಡಿದ ಯಾವುದೇ ಒಂದು ಕಾನೂನು ಜನಪರವಾಗಿ ಇಲ್ಲ ಎಂದು ದೂರಿದರು.

ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳು ಮಾಡಿದ ಶಿಕ್ಷಣ, ಆರೋಗ್ಯ, ಆಹಾರ, ಕಾರ್ಮಿಕರ ಕುರಿತಾದ ಕಾನೂನು, ಕಾಯ್ದೆಗಳು ಸಂಪನ್ಮೂಲವನ್ನು ಕೆಳಗಿನಿಂದ ಮೇಲಕ್ಕೆ ಎತ್ತಬೇಕಿತ್ತು. ಆದರೆ, ಎಲ್ಲವೂ ಮೇಲಿಂದ ಕೆಳಕ್ಕಿಳಿಸಿವೆ ಎಂದ ಅವರು, ದೇಶದಲ್ಲಿ ಮುಸ್ಲಿಮ್ ಹಾಗೂ ಪಕ್ಕದಲ್ಲಿ ಪಾಕಿಸ್ತಾನ ಇಲ್ಲದಿದ್ದಿದ್ದರೆ ಬಿಜೆಪಿ ಇಂದು ಇರುತ್ತಿರಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಕಣಕಾರ ಎಂ.ಎ.ಸಿರಾಜ್, ಜನಜಾಗೃತಿ ಅಭಿಯಾನ ಸಂಚಾಲಕ ಎಂ.ಎನ್.ಶ್ರೀರಾಮ್, ಎಐಡಿವೈಓ ಕಾರ್ಯದರ್ಶಿ ಶಶಿಕುಮಾರ್, ಎಐಡಿಎಸ್‌ಓನ ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಮತ್ತಿತರರಿದ್ದರು.

‘ಜನಪರ ನೀತಿಗಳು ಆಗಬೇಕಾದರೆ ಮೊದಲು ಜನರ ಅಭಿಪ್ರಾಯ ಪಡೆಯಬೇಕು. ಅನಂತರ ತಜ್ಞರ ಅಭಿಪ್ರಾಯ ಪಡೆದು ಕಾಯ್ದೆ, ಕಾನೂನು ರೂಪಿಸಬೇಕು. ಆದರೆ, ಕೇಂದ್ರ ಸರಕಾರ ಸಿಎಎ ಮಾಡುವ ವೇಳೆ ಯಾವುದೇ ಚರ್ಚೆಯಿಲ್ಲದೆ, ಏಕಾಏಕಿ ಅನುಮೋದಿಸಿರುವುದು ದುರಂತ. ಸಂಸತ್ ಸದಸ್ಯರೂ ಅದರ ಕುರಿತು ಚರ್ಚೆಗೆ ಉತ್ಸಾಹ ತೋರಿಸಿಲ್ಲ.

-ಎಂ.ಎನ್.ಶ್ರೀರಾಮ್, ಜನಜಾಗೃತಿ ಅಭಿಯಾನ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News