ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ನಿರಾಕರಣೆ ಸಂವಿಧಾನದ ವಿರುದ್ಧವಾದ ಅಂಶ: ಹೈಕೋರ್ಟ್

Update: 2020-02-02 18:51 GMT

ಬೆಂಗಳೂರು, ಫೆ.2: ಬೇರೆ ಕಾಲೇಜಿಗೆ ವರ್ಗಾವಣೆ ಬಯಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ಕೊಡಲು ಬರುವುದಿಲ್ಲ ಎಂಬ ಷರತ್ತು ಸಂವಿಧಾನದ 23(1)ನೆ ವಿಧಿಗೆ ತದ್ವಿರುದ್ಧವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಈ ಕುರಿತು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರ ಪುತ್ರಿ ಸಂಹಿತಾ ಉಲ್ಲೋಡ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಏನಿದು ಪ್ರಕರಣ: ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರ ಪುತ್ರಿ ಸಂಹಿತಾ ಉಲ್ಲೋಡ ಅವರು ಬೆಳಗಾವಿ ಜಿಲ್ಲೆಯ ಶಹಾಪುರದ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್ ಪದವಿ ಅಧ್ಯಯನ ಮಾಡುತ್ತಿದ್ದರು. ತಮ್ಮ ಎರಡನೆ ವರ್ಷದ ಪದವಿಯನ್ನು ಅವರು ಬೆಂಗಳೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಪೂರೈಸಲು ಬಯಸಿ ಕಾಲೇಜಿಗೆ ಮನವಿ ಮಾಡಿದ್ದರು. ಈ ಮನವಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರಾಕ್ಷೇಪಣಾ ಪತ್ರ ನೀಡಿತ್ತು. ಅಂತೆಯೇ, 1990ರ ಜೂನ್ 9ರ ಸರಕಾರಿ ಆದೇಶದ ಪ್ರಕಾರ, ನಿಮ್ಮನ್ನು ಶಿಷ್ಯವೇತನ (ಸ್ಟೈಪೆಂಡ್) ರಹಿತವಾಗಿ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿತ್ತು. ಸಂಹಿತಾ ಸರಕಾರದ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ವೇಳೆ ಸರಕಾರದ  ಪರ ವಕೀಲರು, ಬೇರೆ ಕಾಲೇಜಿಗೆ ವರ್ಗಾವಣೆ ಬಯಸಿದ ವಿದ್ಯಾರ್ಥಿನಿ ಷರತ್ತಿಗೆ ಒಪ್ಪಿಕೊಂಡು ಸ್ಥಳಾಂತರಗೊಂಡಿರುವಾಗ ಇದನ್ನು ಪ್ರಶ್ನಿಸುವುದು ಸಾಧುವಲ್ಲ ಎಂಬ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News