ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ: ಡಾ.ಎಚ್.ಎಸ್.ವೆಂಕಟೇಶಮೂರ್ತಿ

Update: 2020-02-02 19:04 GMT

ಬೆಂಗಳೂರು, ಫೆ.2: ಪ್ರತಿಭೆ ಇದ್ದರೂ ಅದನ್ನು ಅಭಿವ್ಯಕ್ತಿಗೊಳಿಸಲು ಸೂಕ್ತ ವೇದಿಕೆ ಸಿಗುತ್ತಿಲ್ಲ. ಗಾಯನಕ್ಕೆ ಗಾಯಕ ಮತ್ತು ಕೇಳುಗರಿಬ್ಬರ ಮನವನ್ನು ಮುದಗೊಳಿಸುವ ಶಕ್ತಿ ಇದೆ. ಇವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಹೊಂಬಾಳೆ ಪ್ರತಿಭಾ ರಂಗದಂತಹ ವೇದಿಕೆಯ ಅಗತ್ಯವಿದೆ ಎಂದು 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಎಚ್. ಎಸ್.ವೆಂಕಟೇಶ್ ಮೂರ್ತಿ ಅಭಿಪ್ರಾಯಪಟ್ಟರು. 

ರವಿವಾರ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಹೊಂಬಾಳೆ ಪ್ರತಿಭಾರಂಗದ ವತಿಯಿಂದ ಏರ್ಪಡಿಸಿದ್ದ ಹೊಂಬಾಳೆ ಬೆಳ್ಳಿಬೆಡಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಪ್ರತಿಭಾ ರಂಗವು ಯವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಆನೇಕ ಕಲಾವಿದರನ್ನ ಹೊರತರುವುದರ ಜತೆ ಕಲಾವಿದರ ಬಾಳಿಗೆ ಬೇಳಕಾಗಿದೆ ಎಂದು ಹೇಳಿದರು.

ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಹೊಂಬಾಳೆ ತನ್ನ ಹೆಸರಲ್ಲೇ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಕನ್ನಡ ಸೇವೆ ಮತ್ತು ಕನ್ನಡ ಖ್ಯಾತ ಕವಿಗಳನ್ನು ಪರಿಚಯಿಸುವ ಆಕಾಂಕ್ಷೆಯನ್ನು ಹೊತ್ತು ವಿಭಿನ್ನ ಆಲೋಚನೆಗಳ ಮೂಲಕ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸಿದ ಕೀರ್ತಿ ಹೊಂಬಾಳೆಗೆ ಸಲ್ಲುತ್ತದೆ ಎಂದರು.

ಕಲಾವಿದ ಬಿ.ವಿ. ಶ್ರೀನಿವಾಸ್ ಮಾತನಾಡಿ, ಪ್ರತಿಭಾರಂಗ ಪ್ರಾರಂಭಿಸಿದಾಗ ಹೊಸ ಆಲೋಚನೆ ಹೊಸ ಪ್ರತಿಭೆಗಳು ಹೊರಬರುತ್ತವೆ ಎಂಬ ವಿಶ್ವಾಸವಿತ್ತು. ಅದರಂತೆ ಹೊಸ ಹೊಸ ಗೀತೆಗಳಿಗಾಗಿ, ಕವನ, ವಚನಗಳ ಸ್ಪರ್ಧೆ ಮಾಡಿದ್ದೆವು. ಇದರ ಪರಿಣಾಮ ಪ್ರತಿಭಾರಂಗದಲ್ಲಿ ಬಹಳಷ್ಟು ಹೆಸರಾಂತ ಸುಗಮ ಸಂಗೀತ ಗಾಯಕರು ನಮ್ಮ ಮುಂದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ, ಹಿರಿಯ ಕಲಾವಿದ ಪ.ಸ.ಕುಮಾರ್, ಹಿರಿಯ ವಾದ್ಯಗಾರ ಎಸ್. ಬಾಲಸುಬ್ರಹ್ಮಣ್ಯ(ಬಾಲಿ), ಸಂಗೀತ ಸಂಯೋಜಕ ಬಿ.ವಿ. ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೊಂಬಾಳೆ ಪ್ರತಿಭಾರಂಗದ ಅಧ್ಯಕ್ಷ ಪಾಲ್ಗುಣ, ಕಾರ್ಯದರ್ಶಿ ಎಂ.ಯಶವಂತರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News