ಬಿಸಿಯೂಟ ಯೋಜನೆಯ ಮೌಲ್ಯಗಳು ಬೀದಿಪಾಲಾಗದಿರಲಿ

Update: 2020-02-04 06:06 GMT

ಆವರೆಗೆ ನಾಲ್ಕು ಗೋಡೆಗಳ ನಡುವೆ ಪಠ್ಯ ಪುಸ್ತಕದ ಬದನೆಕಾಯಿಯನ್ನೇ ಉರು ಹೊಡೆಯುತ್ತಿದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಬದುಕಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾದುದು ‘ಬಿಸಿಯೂಟ’ ಎನ್ನುವ ಒಂದು ಹೊಸ ಪಠ್ಯ ಪ್ರವೇಶವಾದ ಬಳಿಕ. ಶಿಕ್ಷಣದ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಊಟದ ತಟ್ಟೆಯಲ್ಲಿ ಕಲಿಸಿಕೊಡುವ ಒಂದು ಅಪರೂಪದ ಪ್ರಯೋಗವಾಗಿತ್ತು ಬಿಸಿಯೂಟ ವ್ಯವಸ್ಥೆ. ಮೇಲ್ನೋಟಕ್ಕೆ ಇದು ಊಟಕ್ಕಿಲ್ಲದ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತಂದ ಯೋಜನೆಯಾಗಿತ್ತು. ಬಡತನದ ಕಾರಣದಿಂದ ಅದೆಷ್ಟೋ ಮಕ್ಕಳು ಅರ್ಧದಲ್ಲೇ ಶಾಲೆ ತೊರೆಯಬೇಕಾಗಿತ್ತು. ಕೆಲವು ಕುಟುಂಬಗಳು ಮಕ್ಕಳನ್ನೂ ದುಡಿಮೆಗೆ ಕಳುಹಿಸುವುದು ಅನಿವಾರ್ಯವಾಗಿರುವುದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯಬೇಕಾಗಿತ್ತು. ಯಾವಾಗ ಬಿಸಿಯೂಟ ಜಾರಿಗೆ ಬಂದಿತೋ, ಉತ್ತರ ಕರ್ನಾಟಕದಲ್ಲಿ ಏಕಾಏಕಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕುಟುಂಬ ಶಾಲೆಯ ಕಡೆಗೆ ಆಕರ್ಷಿತವಾಯಿತು. ಕನಿಷ್ಠ ಶಾಲೆಯ ನೆಪದಲ್ಲಾದರೂ ತನ್ನ ಮಗು ಒಂದು ಹೊತ್ತಿನ ಊಟವನ್ನು ಪಡೆದುಕೊಳ್ಳುತ್ತದೆಯೆಂಬ ತೃಪ್ತಿಯಿಂದ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಿದರು. ಹಸಿವು ಇಂಗಿದ ಬಳಿಕವಷ್ಟೇ ಪಾಠ ತಲೆಗೆ ಹತ್ತುತ್ತದೆ. ಹಸಿದ ಹೊಟ್ಟೆಯಲ್ಲಿ ಕಲಿಯುವ ಪಾಠ ಮಸ್ತಿಷ್ಕವನ್ನು ತಲುಪಲಾರದು. ಈ ನಿಟ್ಟಿನಲ್ಲಿ, ಮಧ್ಯಾಹ್ನದ ಬಿಸಿಯೂಟ ಸಾಮಾಜಿಕ, ಶೈಕ್ಷಣಿಕ ವಲಯದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿತು.

ಇದೇ ಸಂದರ್ಭದಲ್ಲಿ ಬಿಸಿಯೂಟ ಒಂದು ವೌಲಿಕ ಪಠ್ಯವಾಗಿಯೂ ವಿದ್ಯಾರ್ಥಿಗಳ ಬದುಕನ್ನು ಪ್ರವೇಶಿಸಿತು. ಶ್ರೀಮಂತರು, ಬಡವರು, ವಿವಿಧ ಧರ್ಮೀಯರು, ವಿವಿಧ ಜಾತಿಗಳಿಂದ ಬಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಒಂದೇ ಸಾಲಲ್ಲಿ ಕುಳಿತು ಒಟ್ಟಾಗಿ ‘ಬಿಸಿಯೂಟ’ವನ್ನು ಸವಿಯುವುದು ಬಹುದೊಡ್ಡ ಮಾನವೀಯ ವೌಲ್ಯಗಳನ್ನು ಅವರಿಗೆ ಕಲಿಸಿಕೊಟ್ಟಿತು. ಬೇರೆ ಬೇರೆ ವರ್ಗಗಳಿಗೆ ವಿದ್ಯಾರ್ಥಿಗಳು ತಮ್ಮ ತಮ್ಮ ತಾರತಮ್ಯದ ಬುತ್ತಿಯೂಟವನ್ನು ಪಕ್ಕಕ್ಕಿಟ್ಟು, ಸಮಾನವಾದ ತಟ್ಟೆಯೊಂದರಲ್ಲಿ ಉಣ್ಣುವುದನ್ನು ಬಿಸಿಯೂಟ ಕಲಿಸಿಕೊಟ್ಟಿತು. ಇದು ಶಾಲೆಯಲ್ಲಿ ಕಲಿಸುವ ಯಾವುದೇ ಪಠ್ಯಕ್ಕಿಂತಲೂ ಶ್ರೇಷ್ಠವಾದ ಪಾಠವಾಗಿತ್ತು. ಈ ದೇಶದಲ್ಲಿ ಮೇಲ್‌ಜಾತಿ, ಕೆಳಜಾತಿ ಎನ್ನುವ ಭೇದಗಳು ಇನ್ನೂ ಹಸಿಯಾಗಿವೆ.ವಿವಿಧ ಜಾತಿ, ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳನ್ನು ಈ ಜಾತಿಯ ಗೋಡೆಗಳಿಂದ ಹೊರತಂದು ಅವರನ್ನು ಒಂದಾಗಿಸುವ ಕೆಲಸವನ್ನು ಪರೋಕ್ಷವಾಗಿ ಬಿಸಿಯೂಟ ಮಾಡತೊಡಗಿತು. ಬಿಸಿಯೂಟವನ್ನು ತಯಾರಿಸುವ ತಾಯಂದಿರು ಯಾವುದೇ ಶಿಕ್ಷಕರು ನೀಡುವ ಪಾಠಕ್ಕಿಂತ ಹಿರಿದಾದ ವೌಲ್ಯಗಳುಳ್ಳ ಪಾಠವನ್ನು ಬಿಸಿಯೂಟದ ಮೂಲಕವೇ ಬಡಿಸತೊಡಗಿದರು. ಈ ಬಿಸಿಯೂಟ ತಯಾರಿಸುವ ಮಹಿಳೆಯರು ಕೆಳವರ್ಗದಿಂದ ಬಂದವರಾದರೂ, ಊಟಕ್ಕೆ ಜಾತಿ, ಧರ್ಮಗಳಿಲ್ಲ ಎನ್ನುವುದನ್ನು ಅವರ ಮೂಲಕವೇ ವಿದ್ಯಾರ್ಥಿಗಳು ಕಲಿಯತೊಡಗಿದರು. ಒಂದೆಡೆ ದೈಹಿಕ ಪೌಷ್ಟಿಕತೆ, ಇನ್ನೊಂದೆಡೆ ಬೌದ್ಧಿಕ ಪೌಷ್ಟಿಕತೆ ಎರಡನ್ನೂ ಈ ‘ಬಿಸಿಯೂಟ’ ಸರಿದೂಗಿಸತೊಡಗಿತು. ‘ಬಿಸಿಯೂಟ’ ಎಳೆ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ವರ್ಗರಹಿತ, ಜಾತಿ ರಹಿತವಾದ ಬದುಕು ಕೆಲವು ಶಕ್ತಿಗಳಲ್ಲಿ ಅಸಹನೆಯನ್ನು ಬಿತ್ತಿದ್ದು ಸುಳ್ಳಲ್ಲ.

ಈ ನಾಡಿನ ಮೇಲ್ಜಾತಿಯ ಕೈಯಲ್ಲಿರುವ ಮಾಧ್ಯಮಗಳು ಬಿಸಿಯೂಟದ ಉದ್ದೇಶವನ್ನು ವಿಫಲಗೊಳಿಸಲು ಭಾರೀ ಪ್ರಯತ್ನವನ್ನು ನಡೆಸಿದ್ದವು. ‘ಬಿಸಿಯೂಟದಲ್ಲಿ ಹಲ್ಲಿ’ ‘ಬಿಸಿಯೂಟ ತಯಾರಿಯಿಂದ ಪಠ್ಯ ಚಟುವಟಿಕೆಗಳಿಗೆ ತೊಂದರೆ’ ‘ಬಿಸಿಯೂಟದಲ್ಲಿ ಕಳಪೆ ಅಕ್ಕಿ’ ಇತ್ಯಾದಿ ತಲೆಬರಹಗಳ ಸುದ್ದಿಗಳು ವ್ಯಾಪಕವಾಗಿ ಬಂದವಾದರೂ ಈ ಯೋಜನೆಯನ್ನು ತಡೆಯಲು ಅವುಗಳಿಗೆ ಸಾಧ್ಯವಾಗಲಿಲ್ಲ. ಹೊಟ್ಟೆಯ ಅಗತ್ಯ ಎಲ್ಲ ವದಂತಿಗಳನ್ನೂ ‘ನೂಕಾಚೆ ದೂರ’ ಎಂದು ಹೇಳುತ್ತದೆ. ಜಾತಿಯ ಶಕ್ತಿಗಳಿಗೆ ಇದು ನುಂಗಲಾರದ ತುತ್ತಾಯಿತು. ಕೆಳಜಾತಿಯ ಮಹಿಳೆಯರು ಮಾಡಿದ ಅಡುಗೆಯನ್ನು ತಮ್ಮ ಮಕ್ಕಳು ಉಣ್ಣುವುದು ಅವರಿಗೆ ಸಹಿಸುವುದು ಕಷ್ಟವಾಯಿತು. ಆದರೆ ಈ ಕುರಿತಂತೆ ಪ್ರತಿಕ್ರಿಯಿಸಿದರೆ ಅದು ಜಾತಿನಿಂದನೆಯಾಗುತ್ತದೆ ಎನ್ನುವ ಭಯ. ಆದುದರಿಂದ ಮೊಸರಲ್ಲಿ ಕಲ್ಲು ಹುಡುಕತೊಡಗಿದರು. ಹಲವೆಡೆೆ ಕೆಳಜಾತಿಯ ಮಹಿಳೆಯರು ಅಡುಗೆ ಮಾಡುವುದಕ್ಕೆ ವಿರೋಧವೂ ವ್ಯಕ್ತವಾಯಿತು. ಒಂದು ರೀತಿಯಲ್ಲಿ ಜಾತೀಯತೆಯ ಕೆಸರು ಸಮಾಜವನ್ನು ಹೇಗೆ ಕಲುಷಿತಗೊಳಿಸಿದೆ ಎನ್ನುವ ವಾಸ್ತವವನ್ನು ಜಗತ್ತಿಗೆ ಸಾರುವುದಕ್ಕೂ ಬಿಸಿಯೂಟ ಒಂದು ನೆಪವಾಯಿತು. ಹಲವು ಸಂಘರ್ಷಗಳ ನಡುವೆಯೂ ಈ ಬಿಸಿಯೂಟ ಯೋಜನೆ ವಿದ್ಯಾರ್ಥಿಗಳ ಬದುಕಿನಲ್ಲಿ ಒಂದು ಅತ್ಯುತ್ತಮ ಪಠ್ಯವಾಗಿ ಮುಂದುವರಿಯುತ್ತಾ ಬಂದಿದೆ.

ಆದರೂ ಈ ಬಿಸಿಯೂಟ ತಯಾರಿಸುವ ಮಹಿಳೆಯರ ವಿರುದ್ಧ ವ್ಯವಸ್ಥೆ ಸಂಚುಗಳ ಮೇಲೆ ಸಂಚುಗಳನ್ನು ನಡೆಸುತ್ತಾ ಬಂತು. ಅದರ ಭಾಗವಾಗಿಯೇ ಬಿಸಿಯೂಟ ಯೋಜನೆಯಲ್ಲಿ ಖಾಸಗಿ ಶಕ್ತಿಗಳು ಪ್ರವೇಶವಾಗಿರುವುದು. ಧಾರ್ಮಿಕ ಹಿನ್ನೆಲೆಯಿರುವ ಕೆಲವು ಸಂಘಟನೆಗಳು ಬಿಸಿಯೂಟದ ಪ್ರಾಯೋಜಕತ್ವವನ್ನು ವಹಿಸಲು ಮುಂದೆ ಬಂತು. ಬಿಸಿಯೂಟ ಯೋಜನೆಯ ಮಹದುದ್ದೇಶವನ್ನು ಅರಿಯದ ಸರಕಾರ ಹಂತಹಂತವಾಗಿ ಹಲವೆಡೆ ಬಿಸಿಯೂಟವನ್ನು ಧಾರ್ಮಿಕ ಸಂಘಟನೆಗಳಿಗೆ ನೀಡಿತು. ಇದರ ಪರಿಣಾಮವಾಗಿ ಜಾತ್ಯತೀತವಾಗಿದ್ದ ‘ಬಿಸಿಯೂಟ’ಕ್ಕೆ ಮತ್ತೆ ಧರ್ಮ, ಜಾತಿಯ ಕಳಂಕ ಅಂಟಿತು. ಯಾವಾಗ ಈ ಸಂಘಟನೆಗಳು ಅದರ ಹೊಣೆಗಾರಿಕೆಯನ್ನು ವಹಿಸಿತೋ ಅವುಗಳು ಊಟವನ್ನೇ ತಾಮಸ ಮತ್ತು ಸಾತ್ವಿಕ ಎಂದು ವಿಂಗಡಿಸಿ ವಿದ್ಯಾರ್ಥಿಗಳಿಗೆ ಬೋಧಿಸತೊಡಗಿದವು. ಪರಿಣಾಮವಾಗಿ ಈರುಳ್ಳಿ, ಬೆಳ್ಳುಳ್ಳಿಯಂತಹ ಔಷಧೀಯ ಗುಣಗಳುಳ್ಳ ಪದಾರ್ಥಗಳನ್ನು ಬಳಸುವುದಕ್ಕೂ ಹಿಂದೇಟು ಹಾಕತೊಡಗಿದವು. ಇದು ವಿದ್ಯಾರ್ಥಿಗಳಲ್ಲಿ ಆಹಾರ ಪದ್ಧತಿಗಳ ಕುರಿತಂತೆ ಪೂರ್ವಾಗ್ರಹಗಳನ್ನು ಬಿತ್ತತೊಡಗಿತು.

ಇದೀಗ ತಮ್ಮ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಸಿಯೂಟದ ತಾಯಂದಿರು ಬೀದಿಗಿಳಿದಿದ್ದಾರೆ. ಅವರ ಮುಖ್ಯವಾದ ಬೇಡಿಕೆಗಳಲ್ಲಿ, ಬಿಸಿಯೂಟ ಯೋಜನೆಯ ಖಾಸಗೀಕರಣ ಬೇಡ ಎನ್ನುವುದೂ ಒಂದು. ಬಿಸಿಯೂಟದ ಖಾಸಗೀಕರಣವೆಂದರೆ ಪರೋಕ್ಷವಾಗಿ ಅದರ ಜಾತೀಕರಣವೂ ಹೌದು. ಇದೇ ಸಂದರ್ಭದಲ್ಲಿ ತಮ್ಮನ್ನು ಉಳಿದ ಶಾಲೆಯ ಸಿಬ್ಬಂದಿಯಂತೆ ಘನತೆಯಿಂದ ನೋಡಿಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ. ಅದಕ್ಕಾಗಿಯೂ ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಈ ಬೇಡಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ‘ಅನ್ನ ದೇವರಿಗಿಂತ ಅನ್ಯ ದೇವರು ಇಲ್ಲ’ ಎನ್ನುವ ಸಂಸ್ಕೃತಿ ನಮ್ಮದು. ತಮ್ಮ ಬಿಸಿಯೂಟದ ಮೂಲಕ ವಿದ್ಯಾರ್ಥಿಗಳಲ್ಲಿ ಧರ್ಮಾತೀತ, ಜಾತ್ಯತೀತ, ವರ್ಗಾತೀತ ಮನಸ್ಸೊಂದನ್ನು ಕಟ್ಟುತ್ತಿರುವ ಈ ತಾಯಂದಿರು ಯಾವ ಶಿಕ್ಷಕರಿಗಿಂತಲೂ ಕಡಿಮೆಯಿಲ್ಲ. ಆದುದರಿಂದ ಉಳಿದ ಶಿಕ್ಷಕಿಯರಂತೆಯೇ ಈ ತಾಯಂದಿರನ್ನೂ ಶಾಲೆಗಳು ಕಾಣಬೇಕು. ಅದಕ್ಕಾಗಿ ಅವರ ಬೇಡಿಕೆಗಳನ್ನು ಆದ್ಯತೆಯಿಂದ ಮನ್ನಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News