ವಂಚನೆ, ಅಪ್ರಾಮಾಣಿಕತೆ ಆರೋಪ: ಮೋದಿ, ಶಾ ವಿರುದ್ಧ ವಿಚಾರಣೆ ಆರಂಭಿಸಿದ ನ್ಯಾಯಾಲಯ

Update: 2020-02-04 03:36 GMT

ರಾಂಚಿ, ಫೆ.4: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧದ ವಂಚನೆ ಮತ್ತು ಅಪ್ರಾಮಾಣಿಕತೆ ಆರೋಪ ಕುರಿತು ರಾಂಚಿ ಜಿಲ್ಲಾ ನ್ಯಾಯಾಲಯ ವಿಚಾರಣೆ ಆರಂಭಿಸಿದೆ. ಕೇಂದ್ರ ಸಚಿವ ರಾಮದಾಸ್ ಅಟಾವಳೆ ಪ್ರಕರಣದ ಮೂರನೇ ಆರೋಪಿ.

ಹೈಕೋರ್ಟ್ ವಕೀಲ ಎಚ್.ಕೆ.ಸಿಂಗ್ ಎಂಬವರು ಮೋದಿ ಹಾಗೂ ಅಮಿತ್ ಶಾ ವಿರುದ್ಧ ದೂರು ದಾಖಲಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ವರ್ಗಾಯಿಸುವುದಾಗಿ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆಪಾದಿಸಲಾಗಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 415 (ವಂಚನೆ) ಮತ್ತು 420 (ಅಪ್ರಾಮಾಣಿಕತೆ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(ಬಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ಇಂದು ಆರಂಭವಾಗಲಿದೆ.

ಬಿಜೆಪಿ ನೀಡಿದ ಆಶ್ವಾಸನೆ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಸಿಎಎ ಬಗೆಗಿನ ಆಶ್ವಾಸನೆ ಈಡೇರಿಸುವುದಾದರೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಮತ್ತೊಂದು ಪ್ರಮುಖ ಆಶ್ವಾಸನೆಯಾದ 15 ಲಕ್ಷ ರೂಪಾಯಿ ವರ್ಗಾಯಿಸುವ ಆಶ್ವಾಸನೆಯನ್ನು ಏಕೆ ಈಡೇರಿಸಿಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳು ಮತ ಗಳಿಸುವ ಸಲುವಾಗಿ ಸುಳ್ಳು ಆಶ್ವಾಸನೆ ನೀಡಬಾರದು. ಇದು ಜನರಿಗೆ ಮಾಡುವ ವಂಚನೆಯಾಗುತ್ತದೆ ಎಂದು ಅವರು ಆಪಾದಿಸಿದ್ದಾರೆ. ಮಾರ್ಚ್ 2ರಂದು ಇದು ವಿಚಾರಣೆಗೆ ಬರಲಿದೆ.

2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ 15 ಲಕ್ಷ ರೂಪಾಯಿಗಳನ್ನು ಪ್ರತಿಯೊಬ್ಬರ ಖಾತೆಗೆ ವರ್ಗಾಯಿಸುವ ಭರವಸೆ ನೀಡಿತ್ತು. ಇದು ವಾಸ್ತವಕ್ಕೆ ವಿರುದ್ಧವಾದ್ದು ಎನ್ನುವುದು ಸಿಂಗ್ ಅವರ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News