ಕವಿ ಡಾ.ಸಿದ್ದಲಿಂಗಯ್ಯರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ

Update: 2020-02-04 04:11 GMT

ಬೆಂಗಳೂರು, ಫೆ.4: ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಐದು ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡ ಈ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.8ರಂದು ಬನವಾಸಿಯಲ್ಲಿ ನಡೆಯಲಿದೆ.

ದಲಿತ ಮತ್ತು ಬಂಡಾಯ ಚಳವಳಿಯ ಮುಂಚೂಣಿಯಲ್ಲಿದ್ದ ಡಾ.ಸಿದ್ದಲಿಂಗಯ್ಯ ಅವರು ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್ ವಿಚಾರಧಾರೆಗಳಿಂದ ಆಕರ್ಷಿತರಾದವರು.

ಡಾ.ಸಿದ್ದಲಿಂಗಯ್ಯ ಅನೇಕ ಕವನ ಸಂಕಲನಗಳನ್ನು, ವಿಮರ್ಶಾ ಕೃತಿಗಳನ್ನು ಲೇಖನ ಸಂಕಲನಗಳನ್ನು, ನಾಟಕಗಳನ್ನು ರಚಿಸಿದ್ದಾರೆ. ಹೊಲೆ ಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ಆಯ್ದ ಕವಿತೆಗಳು’, ‘ಅಲ್ಲೆಕುಂತವರೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’ ಅವರ ಕವನ ಸಂಕಲನಗಳು. ‘ಹಕ್ಕಿನೋಟ’, ‘ರಸಗಳಿಗೆಗಳು’, ‘ಎಡಬಲ‘, ‘ಉರಿಕಂಡಾಯ ವಿಮರ್ಶಾ ಕೃತಿಗಳು. ‘ಅವತಾರಗಳು’, ‘ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1,2’ ‘ಜನಸಂಸ್ಕೃತಿ’ ಲೇಖನಗಳ ಸಂಕಲನ. ‘ಏಕಲವ್ಯ, ‘ನೆಲಸಮ’, ‘ಪಂಚಮ’ ನಾಟಕಗಳು. ‘ಊರುಕೇರಿ- ಭಾಗ-1, 2’ ಅವರ ಆತ್ಮಕಥೆಯಾಗಿದೆ.

 ಉತ್ತಮ ಚಲನಚಿತ್ರಗೀತ ರಚನೆಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಸಂದೇಶ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಇದೀಗ ಪಂಪ ಪ್ರಶಸ್ತಿಯು ಅವರ ಮುಡಿಗೇರಿದೆ.

ಮಲ್ಲೇಪುರಂ ಜಿ.ವೆಂಕಟೇಶ್ ನೇತೃತ್ವದ ಆಯ್ಕೆ ಸಮಿತಿಯು ಸಿದ್ದಲಿಂಗಯ್ಯರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News