ಹೈಕೋರ್ಟ್‌ಗೆ ಕ್ಷಮೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದ ಬಿಬಿಎಂಪಿ: ಕಾರಣ ಇಲ್ಲಿದೆ...

Update: 2020-02-04 18:42 GMT

ಬೆಂಗಳೂರು, ಫೆ.4: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಿಂದ ಗಾಯಗೊಳ್ಳುವ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಹೈಕೋರ್ಟ್ ಆದೇಶ ಪಾಲನೆ ಮಾಡದೆ ಸಭೆ ನಡೆಸಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸರ್ವಾನುಮತದ ನಿರ್ಣಯ ಕೈಗೊಂಡ ವಿಚಾರ ಸಂಬಂಧ ಬಿಬಿಎಂಪಿ ಆಯುಕ್ತರು ನ್ಯಾಯಾಲಯದ ಕ್ಷಮೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದರು. 

ಈ ಕುರಿತು ನಗರದಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬಿಬಿಎಂಪಿ ಪರ ವಾದಿಸಿದ ವಕೀಲರು, ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳ ಬಗ್ಗೆ ದೂರು ಸಲ್ಲಿಸಲು ಸಹಾಯ ಆ್ಯಪ್ ರೂಪಿಸಲಾಗಿದೆ. ಹಾಗೂ ವಾಟ್ಸಸ್ ನಂಬರ್ ಅನ್ನೂ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಿಂದ ಗಾಯಗೊಳ್ಳುವ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗಿದೆ ಎಂದು ಈ ಹಿಂದೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು. ಆದರೆ, ನ್ಯಾಯಪೀಠವು ಕೋರ್ಟ್ ಆದೇಶ ಪಾಲಿಸದವರ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಲು ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಆದರೆ, ಮಂಗಳವಾರ ರಸ್ತೆ ಗುಂಡಿ ಬಗ್ಗೆ ಆದೇಶ ಪಾಲಿಸದೆ ಮೇಯರ್ ಹಾಗೂ ಉಪ ಮೇಯರ್ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸರ್ವಾನುಮತದ ನಿರ್ಣಯ ಕೈಗೊಂಡ ವಿಚಾರವಾಗಿ ಬಿಬಿಎಂಪಿ ಆಯುಕ್ತರು ನ್ಯಾಯಪೀಠದ ಮುಂದೆ ಕ್ಷಮೆ ಕೋರಿ ಪ್ರಮಾಣ ಪತ್ರ ಸಲ್ಲಿಸಿದರು. ಪ್ರಮಾಣ ಪತ್ರ ಮಾನ್ಯ ಮಾಡಿರುವ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News