ರಾಮಮಂದಿರ ಕುರಿತು ಪ್ರಧಾನಿ ಘೋಷಣೆ; ಇದು ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚುನಾವಣಾ ಆಯೋಗ

Update: 2020-02-05 09:00 GMT

ಹೊಸದಿಲ್ಲಿ, ಫೆ.5: ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆ ನಡೆಸಲು ಟ್ರಸ್ಟ್‌ವೊಂದನ್ನು ಸ್ಥಾಪಿಸಲಾಗುವುದು ಎಂದು ಸಂಸತ್ತಿನಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

‘‘ಸುಪ್ರೀಂಕೋರ್ಟ್‌ನ ನಿರ್ದೇಶನವನ್ನು ಪಾಲಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವನ್ನು ಪ್ರಕಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಚಿವ ಸಂಪುಟ ವಿವರವಾದ ಯೋಜನೆಯನ್ನು ರೂಪಿಸಿದೆ. ನಮ್ಮ ಸರಕಾರ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಎನ್ನುವ ಟ್ರಸ್ಟ್‌ವೊಂದನ್ನು ರಚಿಸಲು ನಿರ್ಧರಿಸಿದೆ. ರಾಮಮಂದಿರ ನಿರ್ಮಾಣ ಹಾಗೂ ಈ ವಿಚಾರಕ್ಕೆ ಸಂಬಂಧಿಸಿ ಈ ಟ್ರಸ್ಟ್ ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳಲಿದೆ’’ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಪ್ರಧಾನಿ ಘೋಷಿಸಿದ ಬೆನ್ನಿಗೇ ಆಡಳಿತಾರೂಢ ಪಕ್ಷದ ಸದಸ್ಯರು ಜೈ ಶ್ರೀರಾಮ್ ಎಂದು ಕೂಗುತ್ತಾ ಮೇಜನ್ನು ಗುದ್ದಿದರು.

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇನ್ನು ಕೇವಲ ಎರಡು ದಿನ ಬಾಕಿ ಇರುವಾಗ ಪ್ರಧಾನಿ ಮೋದಿ ಅಯೋಧ್ಯೆ ಕುರಿತು ಘೋಷಣೆ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿದ ಚುನಾವಣಾ ಆಯೋಗ,‘‘ಈ ಘೋಷಣೆಗೆ ಅನುಮತಿಯ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಟ್ರಸ್ಟ್ ರಚನೆ ಕುರಿತ ಘೋಷಣೆಯನ್ನು ಫೆಬ್ರವರಿ 9ರೊಳಗೆ(ದಿಲ್ಲಿ ಚುನಾವಣೆ ನಡೆದ ಮರುದಿನ)ಮಾಡಬೇಕು. ಇದಕ್ಕೂ ಮೊದಲೇ ಸರಕಾರ ಅನುಷ್ಠಾನ ವರದಿಯನ್ನು ನೀಡಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News