ನಿವೃತ್ತ ಸಿಜೆಐ ಗೊಗೋಯ್ ನ್ಯಾಯಾಂಗಕ್ಕೆ ಕಳಂಕ; ಇತರ ಸುಪ್ರೀಂ ನ್ಯಾಯಮೂರ್ತಿಗಳೂ ಖಂಡನಾರ್ಹರು

Update: 2020-02-06 04:58 GMT
ರಂಜನ್ ಗೊಗೋಯ್

ಭಾರತದ ನಿವೃತ್ತ ಸಿಜೆಐ ದೀಪಕ್ ಮಿಶ್ರಾ, ಸುಪ್ರೀಂಕೋರ್ಟ್ ಪ್ರಕರಣಗಳ ಹಂಚಿಕೆಯಲ್ಲಿ ಸರಿಯಾಗಿ ವರ್ತಿಸದಿದ್ದಾಗ ರಂಜನ್ ಗೊಗೋಯ್ ಸೇರಿದಂತೆ ದೇಶದ ಅತ್ಯುನ್ನತ ನ್ಯಾಯಾಲಯದ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಪ್ರತಿಭಟಿಸಿದರು. 2018ರ ಜನವರಿಯಲ್ಲಿ ಮುಕ್ತ ಪತ್ರಿಕಾಗೋಷ್ಠಿ ಕರೆದು ಮಿಶ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ಸಲ್ಲಿಸಿದರು.

ಆದರೆ ಗೊಗೋಯ್ (ನಾನು ಅವರನ್ನು ನ್ಯಾಯಮೂರ್ತಿ ಎಂದು ಕರೆಯುವುದಿಲ್ಲ) ಅದಕ್ಕಿಂತ ದೊಡ್ಡ ಹಲವು ಬಗೆಯ ದುರ್ನಡತೆ ಪ್ರದರ್ಶಿಸಿದರು. ಮುಖ್ಯವಾಗಿ ಬಿಜೆಪಿ ನೇತೃತ್ವದ ಸರ್ಕಾರದ ಮುಂದೆ ಮಂಡಿಯೂರಿದರು; ಸುಪ್ರೀಂಕೋರ್ಟನ್ನು ಬಹುತೇಕ ರಾಜಕೀಯ ಆಡಳಿತಕ್ಕೆ ಹಸ್ತಾಂತರಿಸಿದರು; ಜನತೆಯ ಹಕ್ಕನ್ನು ರಕ್ಷಿಸುವ ಪವಿತ್ರ ಕರ್ತವ್ಯವನ್ನು ಕೈಬಿಟ್ಟರು . ಗೊಗೋಯ್ ಇವೆಲ್ಲವನ್ನು ಮಾಡಿದರೂ, ಸುಪ್ರೀಂಕೋರ್ಟ್ ನ ಇತರ ನ್ಯಾಯಮೂರ್ತಿಗಳಿಂದ ಭಿನ್ನಮತದ ಒಂದು ಮುಕ್ತ ಧ್ವನಿಯೂ ಕೇಳಿಬರಲಿಲ್ಲ. 

ಅವಮಾನಕರ ಮಿಸಾ ತೀರ್ಪು (ಎಡಿಎಂ ಜಬಲ್ಪುರ ವರ್ಸಸ್ ಶಿವಕಾಂತ್ ಶುಕ್ಲಾ) 1976ರಲ್ಲಿ ಹೊರಬಿದ್ದಾಗ ಕನಿಷ್ಠಪಕ್ಷ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಅವರ ದಿಟ್ಟ ಭಿನ್ನಾಭಿಪ್ರಾಯದ ಧ್ವನಿಯಾದರೂ ಕೇಳಿಬಂತು. ಆದರೆ ನಾಚಿಕೆಗೇಡು ಎನಿಸುವಂಥ ಅಯೋಧ್ಯೆ ತೀರ್ಪು 2019ರ ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ನಿಂದ ಹೊರಬಿದ್ದಾಗ ಭಿನ್ನಮತದ ಸದ್ದಡಗಿತ್ತು.

ಗೊಗೋಯ್ ನ್ಯಾಯಾಂಗಕ್ಕೆ ಕಳಂಕ, ಆದರೆ ನ್ಯಾಯಾಂಗದ ಆಯಾಮದಿಂದ ನೋಡಿದರೆ ಎಲ್ಲ ನ್ಯಾಯಮೂರ್ತಿಗಳೂ ಸಮಾನರು ಹಾಗೂ ಮುಖ್ಯ ನ್ಯಾಯಮೂರ್ತಿ ಸರ್ವಶ್ರೇಷ್ಠರಲ್ಲ. ಹಾಗಿದ್ದ ಮೇಲೆ ಇತರ ನ್ಯಾಯಮೂರ್ತಿಗಳು ತಮ್ಮ ಆತ್ಮಸಾಕ್ಷಿ ಗೊಗೋಯ್ ಮುಂದೆ ಶರಣಾಗುವಂತೆ ಮಾಡಿದ್ದೇಕೆ? ಇದು ಈ ಕೆಳಗಿನ ನಿದರ್ಶನಗಳಿಂದ (ಇತರ ಹಲವು ಸೇರಿ) ವೇದ್ಯವಾಗುತ್ತದೆ.

1. ಅಯೋಧ್ಯೆ ವಿಚಾರಣೆ ಪೀಠದಲ್ಲಿ ಐದು ಮಂದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿದ್ದರು. ಬಹುಶಃ ಕೇಂದ್ರ ಸರ್ಕಾರ ಹೇಳಿದಂತೆ ಗೊಗೋಯ್ ಇದನ್ನು ಮಾಡಬೇಕಿತ್ತು. ಆದರೆ ಇತರ ನಾಲ್ವರು ನ್ಯಾಯಮೂರ್ತಿಗಳು ಇಂಥ ಅತಿರೇಕದ, ಅವಮಾನಕರ ಮತ್ತು ವಿರೋಧಾಭಾಸದ ತೀರ್ಪನ್ನು ಹೇಗೆ ಒಪ್ಪಿಕೊಂಡರು? (ಆನ್ ಲೈನ್ ನಲ್ಲಿ ಪ್ರಕಟವಾದ  The Ayodhya verdict is based on a strange feat of logic    ಲೇಖನವನ್ನು ಓದಿ)ಈ ನಾಲ್ವರು ನ್ಯಾಯಮೂರ್ತಿಗಳ ಅಂತರಂಗದ ಧ್ವನಿ ಮತ್ತು ಧರ್ಮಸೂಕ್ಷ್ಮತೆ ಎಲ್ಲಿ ಹೋದವು? ಅಥವಾ ಈ ನ್ಯಾಯಮೂರ್ತಿಗಳು ಇವನ್ನು ಗೊಗೋಯ್ ಗೆ ಬಿಟ್ಟು ಕೊಟ್ಟರೆ ?

2. ಅಂಕಣಕಾರ ಅಭಿಜಿತ್ ಅಯ್ಯರ್ ಮಿತ್ರಾ ಅವರ ಜಾಮೀನು ಅರ್ಜಿಯನ್ನು 2018ರ ಅಕ್ಟೋಬರ್ ನಲ್ಲಿ ತಿರಸ್ಕರಿಸಿದಾಗ, ಗೊಯೋಗ್ ಬೀಡುಬಿಡುಸಾದ ಮತ್ತು ಕ್ರೂರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು: "ನಿಮಗೆ ಸುರಕ್ಷಿತ ಸ್ಥಳ ಎಂದರೆ ಜೈಲು". ಆದರೆ ರಾಜಸ್ಥಾನ ಸರ್ಕಾರ ವರ್ಸಸ್ ಬಾಲಚಂದ್ ಪ್ರಕರಣದಲ್ಲಿ 1977ರಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೀಡಿದ ತೀರ್ಪಿನ ಪ್ರಕಾರ, ಆರೋಪಿಯು ತಲೆ ಮರೆಸಿಕೊಳ್ಳುವ ಸಾಧ್ಯತೆ ಇದ್ದ ಅಥವಾ ಪುರಾವೆಗಳನ್ನು ತಿರುಚುವ ಸಾಧ್ಯತೆ ಇದ್ದ ಅಥವಾ ಘೋರ ಅಪರಾಧ ಎಸಗಿದ್ದ ಪ್ರಕರಣಗಳನ್ನು ಹೊರತುಪಡಿಸಿ ಜಾಮೀನು ಎನ್ನುವುದು ಭಾರತೀಯ ನ್ಯಾಯಾಲಯಗಳು ಅನುಸರಿಸಬೇಕಾದ ಸಾಮಾನ್ಯ ನಿಯಮ ಎನ್ನುವುದು ದೃಢಪಟ್ಟಿದೆ. ವಾಸ್ತವವಾಗಿ ಅಭಿಜಿತ್ ಮಾಡಿದ ಅಪರಾಧವೆಂಧರೆ ಕೋನಾರ್ಕ್ ದೇವಾಲಯದ ಬಗ್ಗೆ ವಿಡಂಬನಾತ್ಮಕ ಟ್ವೀಟ್ ಮಾಡಿದ್ದು. ಅದಕ್ಕೆ ಕೂಡಾ ಅವರು ತಕ್ಷಣ ಕ್ಷಮೆ ಯಾಚಿಸಿದ್ದರು.

ನಿಶ್ಚಿತವಾಗಿಯೂ ಇದು ಜಾಮೀನು ನೀಡಲು ಯೋಗ್ಯವಾಗಿದ್ದ ಪ್ರಕರಣ; ಇಷ್ಟಾಗಿಯೂ ಅರ್ಜಿ ತಿರಸ್ಕರಿಸಲಾಯಿತು. ಗೊಗೋಯ್ ಅವರು ಕಾನೂನಾತ್ಮಕ ತತ್ವಗಳನ್ನು ಪರಿಶೀಲಿಸದೇ ಬಿಟ್ಟಿದ್ದು ನಿರೀಕ್ಷಿತ; ಆದರೆ ಪೀಠದಲ್ಲಿ ಅವರೊಂದಿಗೆ ಇದ್ದ ಇತರ ಇಬ್ಬರು ನ್ಯಾಯಮೂರ್ತಿಗಳು ಮಾಡಿದ್ದೇನು? ಗೊಗೋಯ್ ಅವರ ಅಭಿಪ್ರಾಯಕ್ಕೆ ಭಿನ್ನಮತವನ್ನು ಏಕೆ ವ್ಯಕ್ತಪಡಿಸಲಿಲ್ಲ ಹಾಗೂ ಕಾನೂನಾತ್ಮಕವಾಗಿ ಇದು ಜಾಮೀನು ನೀಡಲು ಯೋಗ್ಯವಾದ ಪ್ರಕರಣ ಎಂಧು ಏಕೆ ಹೇಳಲಿಲ್ಲ? ಅವರ ಬಗ್ಗೆ ಏಕೆ ಅಷ್ಟೊಂದು ಭಕ್ತಿ?

ನಾನು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ, ನಾನು ಹಿರಿಯ ನ್ಯಾಯಾಧೀಶರೊಬ್ಬರ ಜತೆ ವಿಭಾಗೀಯ ಪೀಠದಲ್ಲಿ ಇದ್ದುದು ನನಗೆ ನೆನಪಿದೆ. ನನ್ನ ಸಲಹೆ ಪಡೆಯದೇ ಅವರು ಪ್ರಕರಣಗಳಲ್ಲಿ ತೀರ್ಪು ನೀಡಲು ಆರಂಭಿಸಿದರು. ಎರಡು, ಮೂರು ಪ್ರಕರಣಗಳಲ್ಲಿ ಹೀಗೆ ಮಾಡಿದ ಬಳಿಕ, ಇದು ನನಗೆ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದೆ. ನಾನು ಕೂಡಾ ವಿಭಾಗೀಯ ಪೀಠದ ಸಮಾನ ಸದಸ್ಯ. ಯಾವುದೇ ಆದೇಶಗಳನ್ನು ನೀಡುವ ಮುನ್ನ ಸಲಹೆ ಪಡೆಯಬೇಕು, ಇಲ್ಲದಿದ್ದರೆ ನಾನು ತೀರ್ಪಿಗೆ ಸಹಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಗೊಗೋಯ್ ಜತೆ ಕುಳಿತಿದ್ದ ನ್ಯಾಯಮೂರ್ತಿಗಳು ಇದನ್ನೇ ಏಕೆ ಹೇಳಲಿಲ್ಲ?

3. ನ್ಯಾಯಮೂರ್ತಿ ಅಖಿಲ್ ಖುರೇಷಿ ಪ್ರಕರಣದಲ್ಲಿ, ಸುಪ್ರೀಂಕೋರ್ಟ್ ಕೊಲಾಜಿಯಂನ ನಾಲ್ವರು ಸದಸ್ಯರು ಗೊಗೋಯ್ ಅವರ ಅಭಿಪ್ರಾಯಕ್ಕೇ ಏಕೆ ಅಂಟಿಕೊಂಡರು ಹಾಗೂ ಮಧ್ಯಪ್ರದೇಶ ಹೈಕೋರ್ಟ್ ಗೆ ಮುಸ್ಲಿಂ ಮುಖ್ಯ ನ್ಯಾಯಮೂರ್ತಿ ಆಗಬಾರದು ಬದಲಾಗಿ ಅವರನ್ನು ತೀರಾ ಚಿಕ್ಕ ತ್ರಿಪುರಾ ಹೈಕೋರ್ಟ್ ಗೆ ಕಳುಹಿಸಬೇಕು ಎಂದು ಬಯಸಿದ ಬಿಜೆಪಿ ಸರ್ಕಾರಕ್ಕೆ ಏಕೆ ಮಣಿದರು? ಗೊಗೋಯ್ ಅವರು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವುದು ನಿರೀಕ್ಷಿತ. ಆದರೆ ಕೊಲೇಜಿಯಂನಲ್ಲಿ ಇದ್ದ ಇತರ ನಾಲ್ಕು ಮಂದಿಯ ಕಥೆ ಏನು? ಅವರ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು?

4. ನ್ಯಾಯಮೂರ್ತಿ ಪ್ರದೀಪ್ ನಂದರಜೋಗ್ ಅವರನ್ನು ಕೇವಲವಾಗಿ ನಡೆಸಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ. ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಐದು ಮಂದಿ ನ್ಯಾಯಾಧೀಶರಿದ್ದ ಕೊಲೀಜಿಯಂ ಅವಿರೋಧವಾಗಿ ಶಿಫಾರಸ್ಸು ಮಾಡಿತ್ತು. ಎಲ್ಲ ಐದು ಮಂದಿ ನ್ಯಾಯಮೂರ್ತಿಗಳು ಈ ಶಿಫಾರಸ್ಸಿಗೆ ಸಹಿ ಮಾಡಿದರು (ಕೊಲೀಜಿಯಂನ ಸದಸ್ಯರಾಗಿದ್ದ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ನನಗೆ ಹೇಳಿದಂತೆ). ಆದರೆ ಗೊಗೋಯ್, ನ್ಯಾಯಮೂರ್ತಿ ನಂದರಜೋಗ್ ಅವರ ಬಗ್ಗೆ ದ್ವೇಷಭಾವನೆ ಹೊಂದಿದ್ದ ನ್ಯಾಯಮೂರ್ತಿ ವಾಲ್ಮೀಕಿ ಮೆಹ್ತಾ ಅವರ ಸಲುವಾಗಿ ಈ ಶಿಫಾರಸ್ಸನ್ನು ನ್ಯಾಯಮೂರ್ತಿ ಲೋಕೂರು ನಿವೃತ್ತಿಯಾಗುವವರೆಗೂ ಜೇಬಿನಲ್ಲೇ ಇಟ್ಟುಕೊಂಡರು. ಬಳಿಕ ಈ ಶಿಫಾರಸ್ಸನ್ನು ವಿಧೇಯ ಕೊಲೀಜಿಯಂ ವಾಪಾಸು ಪಡೆಯುವಂತೆ ನೋಡಿಕೊಂಡರು.

5. ಸಿಬಿಐನ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಎಷ್ಟು ನಿಕೃಷ್ಟವಾಗಿ ಕಂಡಿತು ಎನ್ನುವುದು ಕೂಡಾ ಎಲ್ಲರಿಗೂ ತಿಳಿದಿದೆ. ಆದಾಗ್ಯೂ ಈ ಪೀಠದಲ್ಲಿದ್ದವರು ಗೊಗೋಯ್ ಮಾತ್ರವಲ್ಲ. ನ್ಯಾಯಾಂಗ ನಗ್ನವಾಗಿ ಅಣಕಕ್ಕೀಡಾದಾಗ ಇತರ ನ್ಯಾಯಮೂರ್ತಿಗಳು ಏನು ಮಾಡುತ್ತಿದ್ದರು?

6. ಗೊಗೋಯ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಕ್ಲರ್ಕ್ ಒಬ್ಬರು ಮಾಡಿದ ಆರೋಪದ ಪ್ರಕರಣದಲ್ಲಿ, ಅದರ ವಿಚಾರಣೆಗೆ ನೇಮಕ ಮಾಡಿದ ನ್ಯಾಯಪೀಠದಲ್ಲಿ, ಸುಪ್ರೀಂಕೋರ್ಟ್ ನ ಇತರ ಇಬ್ಬರು ನ್ಯಾಯಮೂರ್ತಿಗಳ ಜತೆಗೆ ಮುಖ್ಯ ನ್ಯಾಯಮೂರ್ತಿ ಸ್ವತಃ ಕುಳಿತಿದ್ದರು. ಗೊಗೋಯ್ ಈ ವಿಚಾರಣೆಯಿಂದ ಹಿಂದೆ ಸರಿಯುವ ನಾಟಕ ಮಾಡಿದರು; ಆದರೆ ಆ ಪ್ರಕರಣದಲ್ಲಿ ನ್ಯಾಯಪೀಠವನ್ನು ವಿಭಜಿಸಿ, ಪ್ರಕರಣವನ್ನು ಗೊಗೋಯ್ ಇಲ್ಲದ ಮತ್ತೊಂದು ಪೀಠಕ್ಕೆ ವಿಚಾರಣೆಗೆ ನೀಡಬೇಕಿತ್ತು.

ಗೊಗೋಯ್ ಅವರ ವಿಚಿತ್ರ ಹಾಗೂ ವಿಲಕ್ಷಣ ವರ್ತನೆಗೆ ಪೀಠದಲ್ಲಿದ್ದ ಇತರ ಇಬ್ಬರು ಸದಸ್ಯರು ಒಪ್ಪಿಗೆ ಸೂಚಿಸಿ ಸಿಜೆಐ ವಿಚಾರಣೆಯಿಂದ ಹಿಂದೆ ಸರಿದ ಬಳಿಕವೂ ನ್ಯಾಯಪೀಠದಲ್ಲಿ ಮುಂದುವರಿಯಲು ಏಕೆ ಅವಕಾಶ ಮಾಡಿಕೊಟ್ಟರು?

ಇಂಥ ಹಲವು ಆಘಾತಕಾರಿ ನಿರ್ದಶನಗಳನ್ನು ನೀಡಬಹುದಾಗಿದೆ. ಗೊಗೋಯ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಪ್ರಮಾದ ಎಸಗಿದ್ದರೆ. ಆದರೆ ಸುಪ್ರೀಂಕೋರ್ಟ್ ನ ಚಾರಿತ್ರ್ಯ ಹರಣವಾಗುತ್ತಿದ್ದರೂ, ಸುಪ್ರೀಂಕೋರ್ಟ್ ನಲ್ಲಿದ್ದ ಇತರ ನ್ಯಾಯಮೂರ್ತಿಗಳು ಭೀಷ್ಮ ಪಿತಾಮಹನಂತೆ ಮೌನ ತಾಳಿದ್ದೇಕೆ? ಅವರು ಕೂಡಾ ಅಷ್ಟೇ ನಿಂದನೀಯರಲ್ಲವೇ? ಮಿಶ್ರಾ ಪ್ರಕರಣದಂತೆ ಗೊಗೋಯ್ ಅವರ ತಪ್ಪು ನಡೆಗಳನ್ನು ವಿರೋಧಿಸಲು ಅವರು ಏಕೆ ಪತ್ರಿಕಾಗೋಷ್ಠಿ ಕರೆಯಲಿಲ್ಲ?

ಈ ಗಂಭೀರ ಪ್ರಶ್ನೆಗಳಿಗೆ ಭಾರತದ ಜನತೆ ಉತ್ತರ ಬಯಸಿದ್ದಾರೆ. ಸಿಗದಿದ್ದರೆ ಈಗಾಗಲೇ ದುರ್ಬಲಗೊಂಡಿರುವ ನ್ಯಾಯಾಂಗದ ಬಗೆಗಿನ ಅವರ ನಂಬಿಕೆ ಸಂಪೂರ್ಣವಾಗಿ ಮಾಯವಾಗುತ್ತದೆ.

ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು 2011ರಲ್ಲಿ ಸುಪ್ರೀಂಕೋರ್ಟ್ ನಿಂದ ನಿವೃತ್ತರಾಗಿದ್ದಾರೆ.

ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರದ್ದು. ಕೃಪೆ : theweek.in

Writer - -ಮಾರ್ಕಂಡೇಯ ಕಾಟ್ಜು

contributor

Editor - -ಮಾರ್ಕಂಡೇಯ ಕಾಟ್ಜು

contributor

Similar News