ಅಪಹರಣಕಾರ ಎಂಬ ಶಂಕೆಯಿಂದ ರೈತನನ್ನು ಥಳಿಸಿ ಕೊಂದ ಗುಂಪು

Update: 2020-02-06 14:09 GMT
ಸಾಂದರ್ಭಿಕ ಚಿತ್ರ

ಭೋಪಾಲ,ಫೆ.6: ಗುಂಪೊಂದು ಅಪಹರಣಕಾರರು ಎಂಬ ಶಂಕೆಯಿಂದ ಓರ್ವ ರೈತನನ್ನು ಥಳಿಸಿ ಕೊಂದು,ಇತರ ಐವರನ್ನು ಗಾಯಗೊಳಿಸಿರುವ ಘಟನೆ ಬುಧವಾರ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬೊರ್ಲಾಯಿ ಗ್ರಾಮದಲ್ಲಿ ನಡೆದಿದ್ದು,ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಸರಕಾರವು ಹತ ಗಣೇಶ ಖಾಸಿಯ ಕುಟುಂಬಕ್ಕೆ ಎರಡು ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.

ರೈತರು ಮತ್ತು ಲೇಬರ್ ಕಂಟ್ರಾಕ್ಟರ್‌ಗಳ ನಡುವಿನ ವಿವಾದ ಗುಂಪಿನಿಂದ ಥಳಿಸಿ ಹತ್ಯೆಗೆ ಮೂಲಕಾರಣವಾಗಿದೆ ಎಂದು ಧಾರ್ ಜಿಲ್ಲಾ ಎಸ್‌ಪಿ ಆದಿತ್ಯ ಪ್ರತಾಪ ಸಿಂಗ್ ತಿಳಿಸಿದರು.

 ಈ ರೈತರು ಕೃಷಿ ಕೆಲಸಗಳಿಗೆ ಕೂಲಿಗಳನ್ನು ಒದಗಿಸಲು ಖಿರ್ಕಿಯಾ ಗ್ರಾಮದ ಮೂವರು ಗುತ್ತಿಗೆದಾರರಿಗೆ 2.5 ಲ.ರೂ.ನೀಡಿದ್ದರು. ಆದರೆ ಈ ಗುತ್ತಿಗೆದಾರರು ತಮ್ಮ ಭರವಸೆಯಂತೆ ಕೂಲಿಗಳನ್ನು ಒದಗಿಸಿರಲಿಲ್ಲ. ಈ ಬಗ್ಗೆ ರೈತರು ತಕರಾರು ತೆಗೆದಾಗ ಅವರಿಗೆ ಒಂದು ಲ.ರೂ.ಪಾವತಿಸಿದ್ದ ಗುತ್ತಿಗೆದಾರರು ಉಳಿದ 1.5 ಲ.ರೂ.ಗಳನ್ನು ಪಡೆಯಲು ಖಿರ್ಕಿಯಾಕ್ಕೆ ಬರುವಂತೆ ಸೂಚಿಸಿದ್ದರು. ರೈತರು ಎರಡು ಕಾರುಗಳಲ್ಲಿ ಖಿರ್ಕಿಯಾ ತಲುಪಿದಾಗ ಪೂರ್ವ ಯೋಜನೆಯಂತೆ ಗುತ್ತಿಗೆದಾರರು ಮತ್ತು ಸಹಚರರು ಅವರ ಮೇಲೆ ಹಲ್ಲೆ ನಡೆಸಿದ್ದರು. ರೈತರು ಅಲ್ಲಿಂದ ಪರಾರಿಯಾದಾಗ ಹಲ್ಲೆಕೋರರು ಅವರ ಕಾರುಗಳನ್ನು ಹಿಂಬಾಲಿಸಿದ್ದರು. ಸುಮಾರು 25 ಕೀ.ಮೀ.ದೂರದ ಬೊರ್ಲಾಯಿ ತಲುಪಿದಾಗ ಸಂಚಾರ ದಟ್ಟಣೆಯಲ್ಲಿ ರೈತರ ಕಾರುಗಳು ಸಿಕ್ಕಿಹಾಕಿಕೊಂಡಿದ್ದವು. ಅವರನ್ನು ಹೊರಗೆಳೆದ ಹಲ್ಲೆಕೋರರು ಅವರು ಅಪಹರಣಕಾರರು ಎಂಬ ವದಂತಿಯನ್ನು ಹುಟ್ಟಿಸಿದ್ದರು. ಇದರಿಂದ ಪ್ರಚೋದಿತ ಗ್ರಾಮಸ್ಥರ ಗುಂಪು ಬಡಿಗೆ ಮತ್ತು ಕಲ್ಲುಗಳಿಂದ ರೈತರ ಮೇಲೆ ಹಲ್ಲೆ ನಡೆಸಿತ್ತು ಎಂದು ಸಿಂಗ್ ವಿವರಿಸಿದರು.

ಕೊಲೆ ಮತ್ತು ದಾಳಿ ಆರೋಪದಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು ಸುಮಾರು 15 ಅಪರಿಚಿತರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News