ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬ ಸಾಧ್ಯತೆ

Update: 2020-02-06 14:27 GMT

ಬೆಂಗಳೂರು, ಫೆ. 6: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ, ನೂತನ ಸಚಿವರಿಗೆ ಖಾತೆ ಹಂಚಿಕೆ ಕೊಂಚ ವಿಳಂಬವಾಗುವ ಸಾಧ್ಯತೆಗಳಿವೆ.

ಸಂಪುಟದಲ್ಲಿ ಸ್ಥಾನ ಕೈತಪ್ಪಿರುವ ಶಾಸಕರ ಅಸಮಾಧಾನ ಶಮನ ಹಾಗೂ ಕೆಲ ಸಚಿವರು ನಿರ್ದಿಷ್ಟ ಖಾತೆ ಮೇಲೆ ಕಣ್ಣಿಟ್ಟಿದ್ದು, ಅವರ ಮನವೊಲಿಕೆ ಮಾಡುವ ಅನಿವಾರ್ಯತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎದುರಾಗಿದೆ.

ಬೃಹತ್ ನೀರಾವರಿ ಖಾತೆಗೆ ರಮೇಶ್ ಜಾರಕಿಹೊಳಿ, ಗೃಹ ಖಾತೆಗೆ ಬಿ.ಸಿ. ಪಾಟೀಲ್, ಲೋಕೋಪಯೋಗಿ ಅಥವಾ ಇಂಧನ ಖಾತೆಗೆ ಆನಂದ್ ಸಿಂಗ್ ಬೇಡಿಕೆ ಇಟ್ಟಿದ್ದಾರೆ. ಈ ಮಧ್ಯೆ ಮೊದಲ ಬಾರಿಗೆ ಸಚಿವರಾಗಿರುವ ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ, ಎಸ್.ಟಿ.ಸೋಮಶೇಖರ್ ಬೆಂಗಳೂರು ನಗರಾಭಿವೃದ್ಧಿ, ನಾರಾಯಣಗೌಡ -ಸಣ್ಣ ನೀರಾವರಿ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ.

ಹೀಗಾಗಿ ಗೊಂದಲದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಖಾತೆ ನಿರ್ವಹಣೆ ಸಂಬಂಧ ನೂತನ ಸಚಿವ ಸಾಮರ್ಥ್ಯ ಮತ್ತು ಅವರ ದೌರ್ಬಲ್ಯಗಳನ್ನು ಅಳೆದು- ತೂಗಿ ನೋಡಲಿದ್ದಾರೆ. ಅಲ್ಲದೆ, ವರಿಷ್ಠರ ಜತೆ ಸಮಾಲೋಚನೆ ನಡೆಸಿ ಖಾತೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ಶನಿವಾರದೊಳಗೆ ಖಾತೆ ಹಂಚಿಕೆ: ನೂತನವಾಗಿ ಸಂಪುಟಕ್ಕೆ ಸೇರ್ಪಡೆಯಾದ ಹತ್ತು ಮಂದಿಗೂ ಶನಿವಾರದ ಒಳಗಾಗಿ ಖಾತೆ ಹಾಗೂ ಕೊಠಡಿ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ ಸಂಬಂಧ ಸಾಧ್ಯವಾದರೆ ಇನ್ನೊಮ್ಮೆ ಹೊಸದಿಲ್ಲಿ ಹೋಗಿ ಬರುತ್ತೇನೆ ಎಂದ ಅವರು, ಎಂಟು ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ ಅವರನ್ನು ಮಂತ್ರಿ ಮಾಡುವುದು ನೂರಕ್ಕೆ ನೂರು ಖಚಿತ. ಅವರೊಂದಿಗೆ ನಿನ್ನೆಯೇ ಚರ್ಚಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News