ಫೆ.26ರಿಂದ 12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ

Update: 2020-02-06 16:01 GMT

ಬೆಂಗಳೂರು, ಫೆ.6: ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ 12ನೇ ಆವೃತ್ತಿಯು ಫೆ.26ರಿಂದ ಮಾ.4ರವರೆಗೆ ನಡೆಯಲಿದ್ದು, 60 ರಾಷ್ಟ್ರಗಳ 200 ಚಿತ್ರಗಳ ಪ್ರದರ್ಶನವಿದ್ದು, ಈ ಬಾರಿ ರಾಜಾಜಿನಗರದ ಒರಾಯನ್ ಮಾಲ್ ಮಾತ್ರವಲ್ಲದೆ, ವಿವಿಧ ಕಡೆ ಸಿನಿಮಾ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.

ಗುರುವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಿನಿಮಾ ಆಸಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ರಾಜಾಜಿನಗರದಲ್ಲಿನ ಒರಾಯನ್ ಮಾಲ್, ರಾಜಕುಮಾರ ರಸ್ತೆಯ ನವರಂಗ್ ಚಿತ್ರಮಂದಿರ ಹಾಗೂ ಚಾಮರಾಜಪೇಟೆಯ ಕಲಾವಿದರ ಸಂಘದ ರಾಜ್ ಭವನ ಹಾಗೂ ಬನಶಂಕರಿಯ ಸುಚಿತ್ರ ಸಮಾಜದಲ್ಲೂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಎಂಟು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಏಷ್ಯಾದ ಸಿನಿಮಾಗಳು, ಚಿತ್ರ ಭಾರತಿ (ಭಾರತೀಯ ಸಿನಿಮಾಗಳು) ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅದೇ ರೀತಿ, ಚಿತ್ರೋತ್ಸವದಲ್ಲಿ ಪ್ರಮುಖವಾಗಿ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನಿಮಾ, ದೇಶಕೇಂದ್ರಿತ ಚಿತ್ರಗಳು, ಪುನರಾವಲೋಕನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ತುಳು, ಬಂಜಾರ, ಕೊಡವ, ಕೊಂಕಣಿ, ಕೇರಳದ ಬನಿಯಾ, ತಮಿಳುನಾಡಿನ ಇರುಳ, ಅಸ್ಸಾಂನ ಕಾಸಿ ಪಂಗ್ವಾನ ಭಾಷೆಗಳ ಚಿತ್ರಗಳಿಗೆ ವಿಶೇಷ ವಿಭಾಗವನ್ನು ಪರಿಚಯಿಸಲಾಗಿದೆ ಎಂದರು.

ಎಷ್ಟು ಸಿನಿಮಾ? ಯಾರಾರು?: ಉತ್ಸವದ ವಿವಿಧ ವಿಭಾಗಗಳಲ್ಲಿ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಚಲನಚಿತ್ರ ನಿರ್ಮಾಪಕರ ಅಂತರ್‌ರಾಷ್ಟ್ರೀಯ ಮಹಾ ಒಕ್ಕೂಟದ ಪ್ರತಿನಿಧಿ, ನಿರ್ದೇಶಕಿ ಫ್ರಾನ್ಸಿಸ್ ಫೊಲೀರೆನ್ಸ್ ಗಿರೋಟ್, ಎಸ್ಸೋನಿಯಾದ ಚಿತ್ರ ನಿರ್ದೇಶಕ ತಾನೆಲ್ ಟೂಲ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ಚಿತ್ರೋತ್ಸವದ ಚಿತ್ರಕಥಾ ಸಲಹಗಾರ್ತಿ ಕ್ಲೇರ್ ಡೋಬಿನ್ ಸೇರಿದಂತೆ ಫಿಲಿಪೈನ್ಸ್, ಸಿಂಗಾಪುರ, ಹಾಂಕಾಂಗ್, ಇಂಡೋನೇಷ್ಯಾ, ಶ್ರೀಲಂಕಾ, ಬಾಂಗ್ಲಾ, ದಕ್ಷಿಣ ಕೊರಿಯಾದ ನಿರ್ಮಾಪಕರು, ನಿರ್ದೇಶಕರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾದ ವಿಷಯಾಧಾರಿತವಾದ ವಿಭಾಗಗಳಲ್ಲಿ ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ಥಾನ್ಸೇನ್, ಮೀರಾ ಸೇರಿ ಇನ್ನಿತರ ಸಂಗೀತ ಪ್ರಭಾವಿ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ವಿಶ್ವ ಸಿನಿಮಾ ವಿಭಾಗಗಳಲ್ಲಿ ಗೋವಾ, ಮುಂಬೈ, ಬರ್ಲಿನ್, ಟೊರೆಂಟೋ ಸೇರಿದಂತೆ ವಿಶ್ವದ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದರು.

ಆತ್ಮಕಥೆ, ವ್ಯಕ್ತಿಚಿತ್ರಗಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕಾದಂಬರಿಕಾರರ ವ್ಯಕ್ತಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪ್ರಮುಖವಾಗಿ ಸಿನಿಮಾ ಕುರಿತ ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸ ನಡೆಯುತ್ತಿದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ.ವಿ.ಕೆ.ಮೂರ್ತಿ ಅವರ ಸ್ಮಾರಕ ಉಪನ್ಯಾಸವಿದೆ.

ಎರಡು ದಿನಗಳ ಚಿತ್ರಕಥೆ ರಚನಾ ಕಾರ್ಯಾಗಾರ, ಚಿತ್ರ ನಿರ್ಮಾಣದಲ್ಲಿ ಉದ್ಯಮಶೀಲ ವಿಧಾನ, ನಿರ್ಮಾಪಕರಿಗೆ ಕಾನೂನು ನೆರವು, ಪೈರಸಿ ತಡೆ ಮತ್ತು ಕೃತಿಸ್ವಾಮ್ಯ ರಕ್ಷಣೆ ಕುರಿತ ಮಾಹಿತಿ, ಅಂತರ್‌ರಾಷ್ಟ್ರೀಯ ಸಹ ನಿರ್ಮಾಣ- ನಿರ್ಮಾಪಕರ ಯಶೋಪಥ, ಸಿನಿಮಾ ನಿರ್ಮಾಣದಲ್ಲಿ ತಾಂತ್ರಿಕ ಸಮಸ್ಯೆಗಳ ಕುರಿತ ಸಂವಾದ, ಕಥಾಚಿತ್ರಗಳಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯಂತಹ ಪ್ರಮುಖ ವಿಷಯಗಳು ಚರ್ಚೆಗೆ ಒಳಪಡಲಿವೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಸೇರಿದಂತೆ ಪ್ರಮುಖರಿದ್ದರು.

ಪ್ರತಿನಿಧಿಗಳಿಗೆ ಫೆ.27ರಿಂದ ಪ್ರದರ್ಶನ ಆರಂಭವಾಗಲಿದ್ದು, ಆಸಕ್ತರು bookmyshow.com ಅಥವಾ biffes.in ಮೂಲಕ ನೋಂದಾಯಿಸಿಕೊಂಡು, ತಮ್ಮ ಪ್ರವೇಶ ಪತ್ರಗಳನ್ನು ನಂದಿನಿ ಬಡಾವಣೆಯ ಚಲನಚಿತ್ರ ಅಕಾಡೆಮಿ ಕಾರ್ಯಾಲಯ, ಇನ್‌ಫೆಂಟ್ರಿ ರಸ್ತೆಯ ವಾರ್ತಾ ಇಲಾಖೆ, ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪಡೆಯಬಹುದು. ಸಾರ್ವಜನಿಕರಿಗೆ 800 ರೂ., ಚಿತ್ರೋದ್ಯಮ, ಸದಸ್ಯರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ 400 ರೂ. ನೋಂದಣಿ ಶುಲ್ಕವಿದ್ದು, ಹೆಚ್ಚಿನ ಮಾಹಿತಿಗೆ 02261445050, support@bookmyshow.com ಸಂಪರ್ಕಿಸಬಹುದು.

* ಉದ್ಘಾಟನಾ ಸಮಾರಂಭ ಫೆ.26ರಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಉದ್ಘಾಟಿಸಲಿದ್ದಾರೆ

* ಮಾ.4ರಂದು ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಅಂದು ರಾಜ್ಯಪಾಲ ವಜುಭಾಯ್ ವಾಲಾ, ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನ ಚಿತ್ರಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ.

ಬಹುಭಾಷಾ ನಟ ಅನಂತನಾಗ್ ಅವರು ನಟಿಸಿರುವ ಕನ್ನಡ ಹಾಗೂ ಇತರೆ ಭಾಷೆಯ ಅಪರೂಪದ ಚಲನಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಸಿನಿಮಾ ರಂಗದ 125ನೇ ವರ್ಷದ ಅಂಗವಾಗಿ ವಿಶ್ವ ಸಿನಿಮಾ ಲೋಕದ ಖ್ಯಾತನಾಮರಾದ ಐನ್‌ಸ್ಟೈನ್, ಚಾರ್ಲಿ ಚಾಪ್ಲಿನ್, ಬಸ್ಟರ್ ಕೀಟನ್, ಅಕಿರಾ ಕುರೋಸವಾ, ಇಂಗ್ಮರ್ ಬರ್ಗ್‌ಮನ್, ವೆಟ್ಟೋರಿಯೋ ಡಿ ಸಿಕಾ, ಜೀನ್ ಲೂಸ್ ಗೊಡ್ಡಾರ್ಡ್ ಹಾಗೂ ಭಾರತದ ಸತ್ಯಜಿತ್ ರೇ ಅವರ ಅಪರೂಪದ ಚಲನಚಿತ್ರಗಳ ಪ್ರದರ್ಶನಕ್ಕೆ ಒತ್ತು ಕೊಡಲಾಗಿದೆ.

ಫಿಲಂ ಬಜಾರ್ ಈ ಬಾರಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಫಿಲಂ ಬಜಾರ್ ನಡೆಸಲು ಮುಂದೆ ಬಂದಿದ್ದು, ಚಲನಚಿತ್ರ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News