ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರು ತಲುಪಿದ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು

Update: 2020-02-06 17:40 GMT

ಬೆಂಗಳೂರು, ಫೆ.6: ಹೃದಯ ಕಾಯಿಲೆ ಸಂಬಂಧ ಮಂಗಳೂರಿನ ನಲ್ವತ್ತು ದಿನದ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದು, ಗುಣಮುಖವಾಗುವ ವಿಶ್ವಾಸ ಇದೆ ಎಂದು ಜಯದೇವ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಗುರುವಾರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆಂಬುಲೆನ್ಸ್ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಯಿತು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಒಂದು ಸಾವಿರ ಮಕ್ಕಳ ಪೈಕಿ ಒಂದು ಮಗುವಿಗೆ ಇಂತಹ ಸಮಸ್ಯೆ ಕಂಡು ಬರಲಿದೆ. ಇದು ‘ಹಾರ್ಟ್ ಅಟ್ಯಾಕ್ ಅಲ್ಲ. ಬದಲಾಗಿ ಕ್ಯಾಂಜೆನಿಟಿ ಕಾಸಸ್ (ಹೃದಯ ಸಂಬಂಧಿ ಖಾಯಿಲೆ) ಎನ್ನುತ್ತಾರೆ. ಹೃದಯದಲ್ಲಿ ರಂಧ್ರವೂ ಇರುತ್ತದೆ ಎಂದು ಹೇಳಿದರು.

ಶುದ್ಧ ರಕ್ತ, ಅಶುದ್ಧ ರಕ್ತ ಎರಡು ಮಿಶ್ರಣ ಆಗುವ ಲಕ್ಷಣಗಳು ಕಾಣಿಸಿಕೊಳ್ಳಲಿದ್ದು, ಕೆಲ ಖಾಯಿಲೆ ವಾಸಿ ಮಾಡಲು ಸಾಧ್ಯವಿಲ್ಲ. ಆದರೆ, ಕೆಲವೊಂದು ಸಾಧ್ಯವಿದೆ ಎಂದ ಅವರು, ಈ ಮಗುವಿಗೆ ಉಸಿರಾಟದ ತೊಂದರೆ ಇದೆ. ಜ್ವರ ಕೆಮ್ಮು, ನ್ಯುಮೋನಿಯ ಇದೆ. ಟಿಎಪಿವಿಸಿ ಖಾಯಿಲೆಯೂ ಇದೆ. ನಾಲ್ಕು ಪಲ್ಮನರಿ ವೇನ್ಸ್ ( ಶ್ವಾಸಕೋಸದ ಅಭಿಧಮನಿ) ಹೃದಯದ ಎಡ ಭಾಗದಲ್ಲಿರಬೇಕು. ಆದರೆ, ಈ ಮಗುವಿಗೆ ಬಲ ಭಾಗದಲ್ಲಿದೆ. ಈಗ ನಾಲ್ಕು ಪಲ್ಮನರಿ ವೇನ್ಸ್‌ನ ಎಡ ಭಾಗಕ್ಕೆ ಹಾಕಬೇಕು. ಶಸ್ತ್ರಚಿಕಿತ್ಸೆಯ ಅಗತ್ಯವು ಇದ್ದು, ಶೀಘ್ರದಲ್ಲಿಯೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು. ಶಸ್ತ್ರಚಿಕಿತ್ಸೆಯ ವೆಚ್ಚದ ಕುರಿತು ಮಗುವಿನ ಪೋಷಕರು ಚಿಂತಿಸಬೇಕಿಲ್ಲ ಎಂದು ಡಾ.ಸಿ.ಎನ್.ಮಂಜುನಾಥ್ ಭರವಸೆ ನೀಡಿದರು.

ಮಂಗಳೂರು-ಬೆಂಗಳೂರು; 4 ಗಂಟೆ 20 ನಿಮಿಷ..!

ಹೃದಯದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಹಾರಿಸ್ ಗೇರುಕಟ್ಟೆ ಅವರ 40 ದಿನದ ಹಸುಗೂಸನ್ನು ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 4 ಗಂಟೆ 20 ನಿಮಿಷದಲ್ಲಿ ಯಶಸ್ವಿಯಾಗಿ ಕರೆ ತರಲಾಯಿತು.

ಗುರುವಾರ ಮಧ್ಯಾಹ್ನ 12:05ಕ್ಕೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಹೊರಟ ಆ್ಯಂಬುಲೆನ್ಸ್, ಬಿ.ಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್, ನೆಲಮಂಗಲ ಮೂಲಕ ಜಯನಗರದ 9ನೆ ಬ್ಲಾಕ್‌ನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ 4:35ರ ಸುಮಾರಿಗೆ ಬಂದು ತಲುಪಿತು.

ಕಂದಮ್ಮನನ್ನು ಹೊತ್ತು ಆ್ಯಂಬುಲೆನ್ಸ್ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ ಬೆನ್ನಲ್ಲೇ, ರಸ್ತೆಯುದ್ದಕ್ಕೂ ಜನರು, ಸ್ವಯಂಪ್ರೇರಿತರಾಗಿ ಆ್ಯಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟ ದೃಶ್ಯ ಸಾಮಾನ್ಯವಾಗಿತ್ತು. ರಾಜ್ಯ ಪೊಲೀಸ್ ಇಲಾಖೆಯ ಸಕಾಲಿಕ ಸ್ಪಂದನದೊಂದಿಗೆ ಆ್ಯಂಬುಲೆನ್ಸ್ ಸಾಗುವ ಹೆದ್ದಾರಿಯನ್ನು ಸಂಚಾರ ಮುಕ್ತಗೊಳಿಸುವಲ್ಲಿ ಆಯಾ ಪ್ರದೇಶದ ಪೊಲೀಸ್ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿಗಳ ಸಕಾಲಿಕ ನೆರವಿನೊಂದಿಗೆ ಯಶಸ್ವಿಯಾಗಿ ಕರೆತರಲಾಯಿತು.

ಹನೀಫ್‌ಗೆ ಸನ್ಮಾನ, ಪ್ರಶಂಸೆ

ಹೃದಯ ಸಂಬಂಧಿ ಚಿಕಿತ್ಸೆಗಾಗಿ 40 ದಿನದ ಪುಟ್ಟ ಕಂದಮ್ಮನನ್ನು ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿಸಿದ ದ.ಕ. ಜಿಲ್ಲೆಯ ಬೆಳ್ತಂಗಡಿ ಮೂಲದ ಆಂಬುಲೆನ್ಸ್ ಚಾಲಕ ಮುಹಮ್ಮದ್ ಹನೀಫ್ ಅವರನ್ನು ನೆರೆದಿದ್ದ ಜನರು, ಹೂವಿನ ಹಾರ ಹಾಕಿ ಸನ್ಮಾನಿಸಿ, ಅಭಿನಂದಿಸಿದರು. ಸಾಮಾಜಿಕ ಜಾಲತಾಣಗಳಲ್ಲೂ ಹನೀಫ್ ಅವರನ್ನು ಪ್ರಶಂಸಿಸಿದ್ದಾರೆ.

ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಗಳೂರಿನಿಂದ ಆಂಬುಲೆನ್ಸ್ ಗುರುವಾರ ಮಧ್ಯಾಹ್ನ 12:05ಕ್ಕೆ ಹೊರಟು ಸಂಜೆ 4:20ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿಸಿದೆ. ಸಂಚಾರ ದಟ್ಟಣೆ ಸಮಸ್ಯೆಯಿಂದ ನೆಲಮಂಗಲದಿಂದ ಜಯದೇವ ಆಸ್ಪತ್ರೆವರೆಗೆ ಸ್ವಲ್ಪ ಸಮಯ ಆದರೂ, ಕಡಿಮೆ ಅವಧಿಯಲ್ಲಿಯೇ ಬಂದಿರುವೆ ಎನ್ನುತ್ತಾರೆ ಮುಹಮ್ಮದ್ ಹನೀಫ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News