ಶೇ.99ರಷ್ಟು ವಸತಿರಹಿತರ ಮೇಲೆ ಸಿಎಎ-ಎನ್‌ಆರ್‌ಸಿ ತೂಗುಗತ್ತಿ

Update: 2020-02-06 16:22 GMT

ಹೊಸದಿಲ್ಲಿ,ಫೆ.6: ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಈ ಐದು ರಾಜ್ಯಗಳಲ್ಲಿನ ವಸತಿರಹಿತರ ಪೈಕಿ ಶೇ.99 ಮಂದಿಯ ಬಳಿ ಜನನ ಪ್ರಮಾಣಪತ್ರಗಳಿಲ್ಲವೆಂದು ಸಾಮಾಜಿಕ ಕಾರ್ಯಕರ್ತರೂ, ನ್ಯಾಯವಾದಿಗಳ,ಸಂಶೋಧಕರು ಮತ್ತಿತರರನ್ನು ಒಳಗೊಂಡ ನಾಗರಿಕ ಹಕ್ಕುಗಳ ಸಂಘಟನೆ ಬಹಿರಂಗಪಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರ ನೋಂದಣಿ (ಎನ್‌ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆಗಳು ಈ ವರ್ಗದ ಜನರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿವೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿಗಳು ಸಂವಿಧಾನ ವಿರೋಧಿ ಎಂದು ಒಳಗೊಳ್ಳುವಿಕೆ ಹಾಗೂ ಸುಸ್ಥಿರ ನಗರೀಕರಣಕ್ಕಾಗಿನ ರಾಷ್ಟ್ರೀಯ ಒಕ್ಕೂಟ (ಎನ್‌ಸಿಯು) ಹೇಳಿಕೆಯೊಂದರಲ್ಲಿ ತಿಳಿಸಿದೆ. ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ನೇರವಾಗಿ ಅಸಂಘಟಿತ ವಲಯದ ಕಾರ್ಮಿಕರು, ವಸತಿರಹಿತರು, ವಲಸಿಗ ಕಾರ್ಮಿಕರು, ಜೋಪಡಿಗಳಲ್ಲಿ ವಾಸವಾಗಿರುವವರು, ಲಿಂಗಾಂತರಿಗಳು ಇವರಲ್ಲಿ ಹೆಚ್ಚಿನವರು ಜನನ ಪ್ರಮಾಣ ಪತ್ರವನ್ನು ಹೊಂದದೆ ಇರುವುದರಿಂದ ಸಿಎಎ-ಎನ್‌ಸಿಆರ್-ಎನ್‌ಪಿಆರ್ ಅವರ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಲಿದೆ ಎಂದು ಹೇಳಿಕೆ ತಿಳಿಸಿದೆ.

 ಭಾರತವು ಪ್ರಸಕ್ತ ಅತ್ಯಂತ ಪ್ರಕ್ಷುಬ್ಧವಾದ ಕಾಲಘಟ್ಟವನ್ನು ಹಾದುಹೋಗುತ್ತಿದೆ. ಭಾರತದ ನಗರಗಳಲ್ಲಿನ ಜನಸಮುದಾಯದಲ್ಲಿ ಅಗಾಧವಾದ ಅಸಮಾನತೆಯಿರುವುದನ್ನು ಇತ್ತೀಚಿನ ಆಕ್ಸ್‌ಫಾಮ್ ಸಮೀಕ್ಷೆ ವರದಿ ಮಾಡಿರುವ ಬಗ್ಗೆ ಎನ್‌ಸಿಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಆಶ್ಚರ್ಯಕರವೆಂದರೆ ದೇಶದ 63 ಬಿಲಿಯಾಧೀಶರುಗಳ ಬಳಿ, ಭಾರತ ಸರಕಾರದ ಇಡೀ ಬಜೆಟ್‌ಗಿಂತಲೂ ಅಧಿಕ ಹಣವಿದೆ. ನಗರಗಳಲ್ಲಿನ ಆಸ್ತಿಗಳ ಮಾಲಕತ್ವದಲ್ಲಿಯೂ ವ್ಯಾಪಕವಾದ ಅಸಮಾನತೆ ಎದ್ದುಕಾಣುತ್ತಿದೆಯೆಂದು ಅದು ತಿಳಿಸಿದೆ.

ಭಾರತದ ನಗರಗಳಲ್ಲಿ ಆರ್ಥಿಕವಾಗಿ ಅತ್ಯುನ್ನತ ಮಟ್ಟದಲ್ಲಿರುವ ಶೇ.10 ಮಂದಿಗೂ, ಆರ್ಥಿಕವಾಗಿ ಅತ್ಯಂತ ತಳಮಟ್ಟದಲ್ಲಿರುವ ಇತರ 10 ಮಂದಿಯ ನಡುವೆ 50 ಸಾವಿರಪಟ್ಟು ಅಂತರವಿದೆಯೆಂದು ವರದಿ ಹೇಳಿದೆ.

 ಎನ್‌ಡಿಎ ಸರಕಾರದ ಜನವಿರೋಧಿ ಹಾಗೂ ಬಡತನ ವಿರೋಧಿ ನೀತಿಗಳು ವಿಶೇಷವಾಗಿ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಕಡೆಗಣಿಸಲ್ಪಟ್ಟ ವರ್ಗಗಳಿಗೆ ಅಪಾರ ಸಂಕಷ್ಟಗಳನ್ನು ತಂದೊಡ್ಡಿದೆಯೆಂದು ಹೇಳಿಕೆ ತಿಳಿಸಿದೆ.

 ವಿಶ್ವದರ್ಜೆಯ ನಗರಗಳನ್ನು ನಿರ್ಮಿಸುವ ಮತ್ತು ಸ್ವಚ್ಛ ಭಾರತ ಮಿಶನ್, ಪ್ರಧಾನಮಂತ್ರಿ ಅವಾಸ್ ಯೋಜನೆ,ಪುನರುಜ್ಜೀವನಕ್ಕಾಗಿನ ಅಟಲ್‌ ಮಿಶನ್, ನಗರ ಪರಿವರ್ತನೆ ಮತ್ತಿರ ಸರಕಾರದ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆಯೆಂದು ಎನ್‌ಸಿಯು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.

 ವ್ಯಾಪಕ ವಿರೋಧದ ನಡುವೆಯೂ ಕೇಂದ್ರ ಸರಕಾರವು ಸಿಎಎ-ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅನ್ನು 11 ರಾಜ್ಯಗಳಲ್ಲಿ ಜಾರಿಗೊಳಿಸಲು ಮುಂದಾಗಿ ರುವುದು ನಗರಗಳಲ್ಲಿ ಬಡಜನರು ಈಗಾಗಲೇ ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಬಣಿಸುವಂತೆ ಮಾಡಲಿದೆಯೆಂದು ಅದು ಹೇಳಿದೆ. ಪ್ರಸ್ತಾವಿತ ಎನ್‌ಪಿಆರ್-ಎನ್‌ಆರ್‌ಸಿಯಡಿ ನಡೆಸಲಾಗುವ ಜನಗಣತಿ ಪ್ರಕ್ರಿಯೆಯು ದಶದ 10.77 ಲಕ್ಷ ಮಂದಿ ವಸತಿರಹಿತರ ಮೇಲೆ ದುಷ್ಪರಿಣಾಮವನ್ನು ಬೀರಲಿದೆ ಎಂದು ಎನ್‌ಸಿಯು ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News