ಬಿಬಿಎಂಪಿ ಮೇಯರ್-ಉಪ ಮೇಯರ್‌ಗೆ ಹೈಕೋರ್ಟ್ ನೋಟಿಸ್

Update: 2020-02-06 16:35 GMT

ಬೆಂಗಳೂರು, ಫೆ.6: ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಿಂದ ಗಾಯಗೊಳ್ಳುವ ಹಾಗೂ ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಹೈಕೋರ್ಟ್ ಆದೇಶ ಪಾಲನೆ ಮಾಡದೆ ಸಭೆ ನಡೆಸಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸರ್ವಾನುಮತದ ನಿರ್ಣಯ ಕೈಗೊಂಡ ಸಂಬಂಧ ಹೈಕೋರ್ಟ್ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್‌ಗೆ ನೋಟಿಸ್ ಜಾರಿಗೊಳಿಸಿ, ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶಿಸಿದೆ.

ಈ ಕುರಿತು ನಗರದಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ರಸ್ತೆ ಗುಂಡಿ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸದೆ ಕೌನ್ಸಿಲ್ ಸಭೆ ನಡೆಸಿದ್ದಕ್ಕೆ ಈಗಾಗಲೇ ಬಿಬಿಎಂಪಿ ಆಯುಕ್ತರು ಕ್ಷಮೆ ಕೋರಿ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದರಂತೆ ಸಭೆಯಲ್ಲಿ ಹಾಜರಿದ್ದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್‌ಗೆ ನ್ಯಾಯಪೀಠವು ನಿರ್ದೇಶಿಸಿತು. ನಗರದಲ್ಲಿ ಇನ್ನೂ 108 ರಸ್ತೆ ಗುಂಡಿಗಳಿದ್ದು, ಆ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ, ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸಹಾಯವಾಣಿ ಎಂಬ ವಾಟ್ಸ್‌ಅಪ್ ಗ್ರೂಪ್ ಅನ್ನು ಬಿಬಿಎಂಪಿ ಜಾರಿಗೆ ತಂದಿದ್ದರಿಂದ ಆ ಗ್ರೂಪ್‌ಗೆ ಈಗಾಗಲೇ ರಸ್ತೆ ಗುಂಡಿಗಳಿಂದ ಬಿದ್ದು ಗಾಯಗೊಂಡವರು 70 ದೂರುಗಳನ್ನು ದಾಖಲಿಸಿದ್ದಾರೆ. ಆ ವಿಚಾರವಾಗಿಯೂ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿಗೆ ಸೂಚಿಸಿತು.

ರಸ್ತೆ ದುರಸ್ತಿ ಮತ್ತು ಗುಂಡಿ ಮುಚ್ಚುವ ಕಾಮಗಾರಿಗಳ ಗುಣಮಟ್ಟದ ಆಡಿಟ್ ಮಾಡಲು ಐಐಎಸ್‌ಸಿ ತಜ್ಞರನ್ನು ನೇಮಿಸಬೇಕು. ಅವರು ನೀಡುವ ವರದಿ ಆಧಾರದಲ್ಲಿ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಬಿಬಿಎಂಪಿ ಆಯುಕ್ತರ ಅನುಮತಿ ಪಡೆದು ಬಿಡಬ್ಲೂಎಸ್‌ಎಸ್‌ಬಿ, ಬೆಸ್ಕಾಂ ಮತ್ತು ಇನ್ನಿತರರು ಕಾಮಗಾರಿ ಕೆಲಸಕ್ಕಾಗಿ ರಸ್ತೆಗಳನ್ನು ಅಗೆದು ಗುಂಡಿ ಮಾಡಿರುವ ಬಗ್ಗೆ ಬಿಬಿಎಂಪಿ ವರದಿ ನೀಡಬೇಕು. ಹೊಸದಾಗಿ ರಸ್ತೆಗಳಲ್ಲಿನ ಗುಂಡಿಗಳ ಬಗ್ಗೆ ಮಾರ್ಚ್ 31ರೊಳಗೆ ಸಮೀಕ್ಷೆ ನಡೆಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News