ಸಿಎಎ ಪ್ರತಿಭಟನಕಾರರಿಗೆ ನೋಟಿಸ್ ಜಾರಿ: ವಿವರಣೆ ನೀಡದೆ ಇದ್ದಲ್ಲಿ ಅಸ್ತಿ ಮುಟ್ಟುಗೋಲು ಹಾಕುವ ಬೆದರಿಕೆ

Update: 2020-02-06 16:53 GMT

ಅಲಿಗಢ, ಫೆ.6: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಉತ್ತರಪ್ರದೇಶದ ಅಲಿಗಢದಲ್ಲಿ ಧರಣಿ ನಡೆಸುತ್ತಿರುವ 1 ಸಾವಿರಕ್ಕೂ ಅಧಿಕ ಮಂದಿಗೆ ಜಿಲ್ಲಾಡಳಿತವು ಗುರುವಾರ ನೋಟಿಸ್ ಜಾರಿಗೊಳಿಸಿದೆ. ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತಿರುದರ ಕುರಿತು ಸಮಾಧಾನಕರ ವಿವರಣೆ ನೀಡದೆ ಇದ್ದಲ್ಲಿ ತಮ್ಮ ಆಸ್ತಿಯನ್ನು ಕಳೆದುಕೊಳ್ಳಬೇಕಾದೀತೆಂದು ಅದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದೆ.

 ಇದರ ಜೊತೆಗೆ ಸಿಎಎ ವಿರೋಧಿ ಚಳವಳಿಯ ಹೆಸರಿನಲ್ಲಿ ಕಾನೂನು, ಸುವ್ಯವಸ್ಥೆಯನ್ನು ಕದಡಲು ಯತ್ನಿಸದಂತೆ ಎಚ್ಚರಿಕೆ ನೀಡುವ ನೋಟಿಸ್ ‌ಗಳನ್ನು ಕೆಲವು ಸ್ಥಳೀಯ ನಾಯಕರಿಗೆ ಪೊಲೀಸರು ರವಾನಿಸಿದ್ದಾರೆಂದು ತಿಳಿದುಬಂದಿದೆ.

 ಸಿಎಎ ವಿರೋಧಿಸಿ ಅಲಿಗಢದಲ್ಲಿ ಧರಣಿ ನಡೆಸುತ್ತಿರುವ ಸುಮಾರು 1 ಸಾವಿರ ಮಂದಿಗೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ. ಒಂದು ವೇಳೆ ತೃಪ್ತಿಕರವಾದ ಉತ್ತರವನ್ನು ನೀಡದೆ ಇದ್ದಲ್ಲಿ, ಅವರ ಆಸ್ತಿಗೆ ಮುಟ್ಟುಗೊಳ್ಳುವ ಪ್ರಕ್ರಿಯೆಗಳು ಆರಂಭಗೊಳ್ಳಲಿದೆಯೆಂದು ಅವರು ಹೇಳಿದ್ದಾರೆ.

 ಧರಣಿಯಲ್ಲಿ ಪಾಲ್ಗೊಂಡ ಗುರುತಿಸಲ್ಪಟ್ಟ ವ್ಯಕ್ತಿಗಳಿಗೆ ನೋಟಿಸ್ ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಅವರು ಹೇಳಿದ್ದಾರೆ.

ಧರಣಿ ನಡೆಸುತ್ತಿರುವುದರ ಬಗ್ಗೆ ಸಿಎಎ ವಿರೋಧಿ ಪ್ರತಿಭಟನಕಾರರು ಸಮಾಧಾನಕರ ಉತ್ತರ ನೀಡದೆ ಇದ್ದಲ್ಲಿ, ಅವರ ವಿರುದ್ಧ ಭಾರತೀಯ ದಂಡಸಂಹಿತೆಯ ಪ್ರಸಕ್ತ ಸೆಕ್ಷನ್‌ಗಳಡಿ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅಲಿಗಢ ನಗರ ಮ್ಯಾಜಿಸ್ಟ್ರೇಟ್ ವಿನೀತ್ ಕುಮಾರ್ ಸಿಂಗ್ ತಿಳಿಸಿದ್ದಾರ.

  ಸಿಎಎ ಹಾಗೂ ಪ್ರಸ್ತಾಪಿತ ಎನ್‌ಆರ್ ಸಿ ವಿರೋದಿಸಿ ಅಲಿಗಢದ ದಿಲ್ಲಿ ಗೇಟ್ ಪ್ರದೇಶದ ಈದ್ಗಾ ಸಮೀಪ ಕಳೆದ ಒಂದು ವಾರದಿಂದ ನೂರಾರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅನುಮತಿಯಿಲ್ಲದೆ ಜನರು ಗುಂಪು ಸೇರದಂತೆ ನಿಷೇಧಾಜ್ಞೆಯನ್ನು ಕೂಡಾ ಹೇರಲಾಗಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News